ಬೆಳಗಾವಿ: ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ನಡೆದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(ನೀಟ್)ಯಲ್ಲಿ ತಾಲ್ಲೂಕಿನ ಉಚಗಾವಿಯ ರುಚಾ ಪಾವಶೆ ದೇಶಕ್ಕೆ 4ನೇ ಮತ್ತು ರಾಜ್ಯಕ್ಕೆ 2ನೇ ರ್‍ಯಾಂಕ್ ಗಳಿಸಿದ್ದಾರೆ.
‘ನಾನು ಅಗ್ರ 10 ಸ್ಥಾನದೊಳಗೆ ರ್‍ಯಾಂಕ್ ಗಳಿಸುತ್ತೇನೆಂಬ ವಿಶ್ವಾಸವಿರಲಿಲ್ಲ.
‘ನಾನು ಅಗ್ರ 10 ಸ್ಥಾನದೊಳಗೆ ರ್‍ಯಾಂಕ್ ಗಳಿಸುತ್ತೇನೆಂಬ ವಿಶ್ವಾಸವಿರಲಿಲ್ಲ. ಆದರೆ, ಉತ್ತಮ ರ್‍ಯಾಂಕ್ ಸಿಗುವ ನಿರೀಕ್ಷೆಯಿತ್ತು. ಈಗ ನಿರೀಕ್ಷಿಸಿದ್ದಕ್ಕಿಂತ ಅತ್ಯುತ್ತಮ ಫಲಿತಾಂಶ ಬಂದಿರುವುದಕ್ಕೆ ಸಂತಸದೊಂದಿಗೆ ಅಚ್ಚರಿಯೂ ಆಗಿದೆ’ ಎಂದು ರುಚಾ ಪ್ರತಿಕ್ರಿಯಿಸಿದರು.
ರುಚಾ ಅವರದ್ದು ವೈದ್ಯರ ಮನೆತನ. ಅವರ ಮುತ್ತಜ್ಜ, ಅಜ್ಜ ವೈದ್ಯರಾಗಿದ್ದರು. ಈಗ ತಂದೆ-ತಾಯಿ ಹಾಗೂ ಸಹೋದರ ಕೂಡ ವೈದ್ಯರಾಗಿದ್ದಾರೆ. ಉಚಗಾವಿ ಹಾಗೂ ಸುತ್ತಲಿನ ಗ್ರಾಮಗಳ ಜನರಿಗೆ ಒಂದು ಶತಮಾನದಿಂದ ಅವರ ಕುಟುಂಬ ಆರೋಗ್ಯ ಸೇವೆ ಒದಗಿಸುತ್ತಿದೆ.
ನಗರದ ಸೆಂಟ್ ಝೇವಿಯರ್ಸ್ ಪ್ರೌಢಶಾಲೆ ಹಾಗೂ ರಾಜಾ ಲಖಮಗೌಡ ಪಿಯು ವಿಜ್ಞಾನ ಕಾಲೇಜಿನಲ್ಲಿ ರುಚಾ ವ್ಯಾಸಂಗ ಮಾಡಿದ್ದಾರೆ. ನೀಟ್ ತಯಾರಿಗಾಗಿಯೇ ಒಂದು ವರ್ಷ ಮುಂದಿನ ಶಿಕ್ಷಣ ಮೊಟಕುಗಳಿಸಿದ್ದರು. ಕಳೆದ ಬಾರಿ ಅವರಿಗೆ ನೀಟ್‌ನಲ್ಲಿ 500ನೇ ರ್‍ಯಾಂಕ್ ಬಂದಿತ್ತು. ಇದರಿಂದ ತೃಪ್ತಿಗೊಳ್ಳದ ವಿದ್ಯಾರ್ಥಿನಿ ಮತ್ತೊಂದು ಅವಕಾಶ ಬಳಸಿಕೊಂಡರು. ಈ ಪರೀಕ್ಷೆಗಾಗಿ ಎನ್‌ಸಿಇಆರ್‌ಟಿ ಪುಸ್ತಕಗಳು, ಹಳೇ ಪ್ರಶ್ನೆಪತ್ರಿಕೆಗಳನ್ನು ನಿರಂತರವಾಗಿ ಗಮನಿಸಿ ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಎಲ್ಲಿಯೂ ಕೋಚಿಂಗ್ ಪಡೆದಿಲ್ಲ.
‘ಬುಧವಾರ ರಾತ್ರಿ ಫಲಿತಾಂಶ ಪ್ರಕಟಗೊಂಡಾಗ ನಂಬಲಾಗಲಿಲ್ಲ. ಆದರೆ, ಖಚಿತವಾದಾಗ ತುಂಬಾ ಸಂತಸವಾಯಿತು. ಈ ವಿಷಯ ಕೇಳಿ ನಮ್ಮ ಕುಟುಂಬದವರೂ ರಾತ್ರಿಯಿಡೀ ನಿದ್ರಿಸಲಿಲ್ಲ. ಮನೆಯಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಿದೆವು’ ಎಂದು ರುಚಾ ಖುಷಿಪಟ್ಟರು.