ಹೈದರಾಬಾದ್: ಗಣೇಶನ ಹಬ್ಬದ ಲಡ್ಡು ಎಂದಾಕ್ಷಣ ನೆನಪಾಗುವುದು ಹೈದರಾಬಾದ್ನ ಬಾಲಾಪುರ. ಏಕೆಂದರೆ ಪ್ರತಿ ವರ್ಷವೂ ಗಣೇಶನಿಗೆ ಇಟ್ಟ ಲಡ್ಡು ದಾಖಲೆ ಪ್ರಮಾಣದಲ್ಲಿ ಇಲ್ಲಿ ಹರಾಜಾಗುತ್ತದೆ. ಒಂಬತ್ತು ದಿನಗಳವರೆಗೆ ಬಾಲಾಪುರದ ಗಣೇಶೋತ್ಸವ ನಡೆಯುತ್ತದೆ.
9ನೇ ದಿನ ಗಣೇಶ ಲಡ್ಡುವಿನ ಹರಾಜು ನಡೆಯುತ್ತದೆ.
ಕಳೆದ ವರ್ಷ 18 ಲಕ್ಷ 90 ಸಾವಿರ ರೂಪಾಯಿಗಳಿಗೆ ಲಡ್ಡು ಮಾರಾಟವಾಗಿತ್ತು. ಆದರೆ ಈ ಬಾರಿ ಹಿಂದಿನ ಎಲ್ಲಾ ದಾಖಲೆಗಳನ್ನೂ ಮುರಿದು ಲಡ್ಡು ಅತಿ ಹೆಚ್ಚಿನ ಬೆಲೆಗೆ ಮಾರಾಟವಾಗಿದೆ.
ಬಾಲಾಪುರ ಗಣೇಶ ಉತ್ಸವ ಕಮೀಟಿ ಸದಸ್ಯ ವಂಗೇಟಿ ಲಕ್ಷ್ಮಾರೆಡ್ಡಿ ಎನ್ನುವವರು ಈ ದಾಖಲೆ ಬರೆದಿದ್ದಾರೆ. ಅವರು 24 ಲಕ್ಷ 60 ಸಾವಿರ ರೂಪಾಯಿಗೆ ಲಡ್ಡು ಖರೀದಿ ಮಾಡಿದ್ದಾರೆ. ಇದರ ಅರ್ಥ ಕಳೆದ ವರ್ಷಕ್ಕಿಂತ 5.70 ಲಕ್ಷ ರೂಪಾಯಿ ಹೆಚ್ಚಿನ ಬೆಲೆಗೆ ಲಡ್ಡು ಮಾರಾಟವಾಗಿದೆ.
ಅಂದಹಾಗೆ ಈ ವರ್ಷದ ಲಡ್ಡು 21 ಕೆಜಿ ತೂಕದ್ದು. ಇದನ್ನು ಖರೀದಿ ಮಾಡಿದವರ ಜೀವನದಲ್ಲಿ ಅದೃಷ್ಟ, ಆರೋಗ್ಯ ಮತ್ತು ಸಮೃದ್ಧಿ ಬರುತ್ತದೆ ಎಂದು ನಂಬಲಾಗಿದೆ. ಇದಕ್ಕಾಗಿಯೇ ಇದನ್ನು ಬಂಗಾರು ಲಡ್ಡು (ಚಿನ್ನದ ಲಡ್ಡು) ಎಂದೇ ಕರೆಯಲಾಗುತ್ತದೆ. ಈ ಲಡ್ಡು ಖರೀದಿಗೆ ಅಕ್ಕಪಕ್ಕದ ರಾಜ್ಯಗಳಿಂದಲೂ ಜನ ಬರುತ್ತಾರೆ. ಅತಿಹೆಚ್ಚಿನ ಮೊತ್ತದ ಬಿಡ್ ಕೂಗಿದವರಿಗೆ ಲಡ್ಡು ನೀಡಲಾಗುತ್ತದೆ. ಹರಾಜಿನಿಂದ ಬಂದ ಮೊತ್ತವನ್ನು ಬಾಲಾಪುರದ ದೇವಸ್ಥಾನ ಮತ್ತು ಇತರ ಅಭಿವೃದ್ಧಿ ಕಾರ್ಯಗಳಿಗೆ ಬಳಸಲಾಗುತ್ತದೆ.