ಹುಬ್ಬಳ್ಳಿ: ಇಲ್ಲಿನ ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಗುರುವಾರ ಭಾರತ ‘ಎ’ ಹಾಗೂ ನ್ಯೂಜಿಲೆಂಡ್ ‘ಎ’ ತಂಡಗಳ ನಡುವಣ ನಾಲ್ಕು ದಿನಗಳ ‘ಟೆಸ್ಟ್’ ಕ್ರಿಕೆಟ್ ಪಂದ್ಯವು ಮಧ್ಯಾಹ 12 ಗಂಟೆಯಾದರೂ ಆರಂಭಗೊಂಡಿಲ್ಲ.
ಬೆಳಿಗ್ಗೆ 9.30ಕ್ಕೆ ಆರಂಭವಾಗಬೇಕಿದ್ದ ಪಂದ್ಯವನ್ನು ಮೈದಾನದಲ್ಲಿ ತೇವಾಂಶ ಹೆಚ್ಚಿದ್ದ ಕಾರಣ 10.30ಕ್ಕೆ ಆರಂಭಿಸುವುದಾಗಿ ಅಂಪೈರ್‌ಗಳು ಹಾಗೂ ಪಂದ್ಯದ ರೆಫರಿ ಪ್ರಕಟಿಸಿದರು. ಆದರೆ, ಬೆಳಿಗ್ಗೆ 10.30ರ ವೇಳೆಗೆ ಮತ್ತೆ ಕ್ರೀಡಾಂಗಣ ಪರಿಶೀಲಿಸಿದ ಅವರು, ಮಧ್ಯಾಹ್ನದ ಬಳಿಕ ಪಂದ್ಯ ನಡೆಯಲಿದೆ ಎಂದು ಪ್ರಕಟಿಸಿದರು.
ಬುಧವಾರ ರಾತ್ರಿ ಹಾಗೂ ಗುರುವಾರ ನಸುಕಿನಲ್ಲಿ ಸ್ವಲ್ಪ ಮಳೆಯಾಗಿದ್ದು, ಕ್ರೀಡಾಂಗಣ ತೇವಗೊಂಡಿದೆ. ಕ್ರೀಡಾಂಗಣದ ಹಲವು ಸಿಬ್ಬಂದಿ ತೇವಾಂಶ ಹೊರಹಾಕಲು ಶ್ರಮಿಸುತ್ತಿದ್ದಾರೆ.
ಕಾಯುತ್ತಿರುವ ಅಭಿಮಾನಿಗಳು: ಅಪರೂಪಕ್ಕೆ ನಡೆಯುವ ಇಂಥ ಪಂದ್ಯಗಳನ್ನು ಕಣ್ತುಂಬಿಕೊಳ್ಳಲು ನೂರಾರು ಜನರು ಕ್ರೀಡಾಂಗಣದಲ್ಲಿ ನೆರೆದಿದ್ದು, ಪಂದ್ಯದ ಆರಂಭಕ್ಕಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ.
ಆಗೀಗ ಕ್ರೀಡಾಂಗಣಕ್ಕೆ ಬರುವ ನ್ಯೂಜಿಲೆಂಡ್ ಹಾಗೂ ಭಾರತ ತಂಡದ ಆಟಗಾರರನ್ನು ಕಂಡು, ಕೂಗಿ, ಕೈಬೀಸಿ ಸಂಭ್ರಮಿಸಿದ ದೃಶ್ಯ ಕಂಡುಬಂತು.