ಬೆಳಗಾವಿ: ತಾಯಿಯ ಮೇಲೆ ಮನಬಂದಂತೆ ಥಳಿಸಿ ಗಾಯಗೊಳಿಸಿದ ತಂದೆಯನ್ನು ಮಗ ಮಚ್ಚಿನಿಂದ ಕೊಲೆ ಮಾಡಿರುವ ಘಟನೆ ಬೈಲಹೊಂಗಲ ಪಟ್ಟಣದ ಶಿವಾನಂದ ಭಾರತಿ ನಗರದ ಸತ್ಯ ಮಾರ್ಗದಲ್ಲಿ ನಡೆದಿದೆ. ಬೈಲಹೊಂಗಲ ಪಟ್ಟಣದ ರುದ್ರಪ್ಪ ತಳವಾರ (55) ಕೊಲೆಯಾದ ವ್ಯಕ್ತಿ. ಸಂತೋಷ ರುದ್ರಪ್ಪ ತಳವಾರ (30) ಆರೋಪಿಯಾಗಿದ್ದಾನೆ.
ಕ್ಷುಲ್ಲಕ ಕಾರಣಗಳಿಗಾಗಿ ಪತ್ನಿಯೊಂದಿಗೆ ಜಗಳವಾಡಿದ್ದ ರುದ್ರಪ್ಪ, ಪತ್ನಿ ಮಹಾದೇವಿ ಮೇಲೆ ಮನಬಂದಂತೆ ಹಲ್ಲೆಗೈದು ಗಾಯಗೊಳಿಸಿದ್ದಾನೆ. ತಂದೆ-ತಾಯಿ ಜಗಳ ಕೇಳಿ ಹೊರಹೋಗಿದ್ದ ಮಗ ಸಂತೋಷ ಮನೆಗೆ ಬಂದಿದ್ದಾನೆ. ಗಲಾಟೆ ಬಿಡಿಸಿ ಗಾಯಗೊಂಡಿದ್ದ ತಾಯಿಯನ್ನು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾನೆ.

ಘಟನಾ ಸ್ಥಳಕ್ಕೆ ಪೊಲೀಸರ ಭೇಟಿ, ಪರಿಶೀಲನೆ
ಆಸ್ಪತ್ರೆ ಬಿಲ್ 1,500 ರೂಪಾಯಿ ಆಗಿದ್ದು ತನ್ನ ಕೈಯಿಂದ 500 ರೂಪಾಯಿ ಕೊಟ್ಟು ಬಾಕಿ 1000 ರೂ. ಹಣವನ್ನು ತಂದೆಯಿಂದ ಕೇಳಲು ಮನೆಗೆ ಬಂದಿದ್ದ. ಆಗ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಕೋಪಗೊಂಡ ಸಂತೋಷ್, ರುದ್ರಪ್ಪನ ಕುತ್ತಿಗೆಗೆ ಮಚ್ಚಿನಿಂದ ಬಲವಾಗಿ ಹೊಡೆದಿದ್ದಾನೆ. ತೀವ್ರ ರಕ್ತಸ್ರಾವದಿಂದ ಬಳಲಿದ ರುದ್ರಪ್ಪ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ.
Laxmi News 24×7