ತುಮಕೂರು,ಸೆ.03: ಪ್ರಾಥಮಿಕ ಶಾಲೆಯಿಂದ ಐಐಟಿವರೆಗೆ ಸ್ಥಾಪನೆಯಾಗಿರುವುದು ಕಾಂಗ್ರೆಸ್ ಪಕ್ಷದಿಂದಲೇ ಹೊರತು ಬಿಜೆಪಿಯಿಂದಲ್ಲ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಎಪ್ಪತ್ತು ವರ್ಷದಲ್ಲಿ ಏನು ಮಾಡಿದೆ ಎಂದು ಪ್ರಶ್ನಿಸುತ್ತಿದ್ದಾರೆ, ಕಾಂಗ್ರೆಸ್ ಮುಂದಾಲೋಚನೆಯಿಂದಲೇ ಹಸಿರು, ಬಿಳಿ ಮತ್ತು ಹಳದಿ ಕ್ರಾಂತಿಯಾಯಿತು, ನವರತ್ನಗಳ ಮೂಲಕ ಉದ್ಯಮ ಸ್ಥಾಪಿಸಿ ಉದ್ಯೋಗ ದೊರಕಿಸಿದೆ ಎಂದರು.
ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ಮೇಲೆ ರೈಲ್ವೆ, ಬಂದರು ಎಲ್ಲ ಮಾರಾಟ ಮಾಡುತ್ತಿದ್ದಾರೆಯೇ ಹೊರತು ಯಾವುದನ್ನು ಸ್ಥಾಪಿಸುತ್ತಿಲ್ಲ, ಸಮೃದ್ಧ ಭಾರತ ನಿರ್ಮಾಣಕ್ಕೆ ಕಾಂಗ್ರೆಸ್ ಪಕ್ಷದ ಕೊಡುಗೆಯೇ ಹೆಚ್ಚು ಎನ್ನುವುದನ್ನು ಕಾರ್ಯಕರ್ತರು ಮನೆ ಮನೆಗೆ ತಲುಪಿಸಬೇಕು ಎಂದು ಕರೆ ನೀಡಿದರು.
ಅಧಿಕಾರಕ್ಕೆ ಬರುವ ಮುಂಚೆ ಮೋದಿ ಅವರು ನೀಡಿದ್ದ ಭರವಸೆ ಈಡೇರಿಸಿದ್ದಾರೆಯೇ? ಕಳೆದ ಎಂಟು ವರ್ಷದಲ್ಲಿ ಉದ್ಯೋಗ ಹೆಚ್ಚಳವಾಗುವ ಬದಲಿಗೆ ಉದ್ಯೋಗ ಕಳೆದುಕೊಳ್ಳುವಂತಾಗಿದೆ,ಅವೈಜ್ಞಾನಿಕ ತೀರ್ಮಾನಗಳಿಂದ ದೇಶವನ್ನು ಆರ್ಥಿಕ, ಸಾಮಾಜಿಕ ಸಂಕಷ್ಟಕ್ಕೆ ದೂಡಿದ್ದಾರೆ ಎಂದು ಆರೋಪಿಸಿದರು.
ರೈತರ ಆದಾಯ ದ್ವಿಗುಣವಾಗುವ ಬದಲಿಗೆ ಅವರ ಶೋಷಣೆ ಹೆಚ್ಚಳವಾಗಿದೆ, ವಿಮಾ ಕಂಪನಿಗಳಿಗೆ ಅನುಕೂಲವಾಗುವಂತ ನಿಯಮಗಳಿಂದಾಗಿ 26 ಸಾವಿರ ಕೋಟಿ ಲೂಟಿ ಮಾಡಲಾಗಿದೆ, ನಿರಂತರ ಬೆಲೆ ಏರಿಕೆಯಿಂದಾಗಿ ಜನರು ತತ್ತರಿಸಿದ್ದಾರೆ, ದೇಶದಲ್ಲಿ ಜನರು ತೆರಿಗೆ ಹೊರೆಯಿಂದ ಬಳಲುತ್ತಿರುವುದು ಅಚ್ಚೇದಿನ್ ನ ಭಾಗವಾಗಿದೆ. ಬಡವರ ಅನ್ನ ಮೊಸರಿಗೂ ಟ್ಯಾಕ್ಸ್ , ಚಿತಾಗಾರಕ್ಕೂ ಜಿಎಸ್ಟಿ ಹಾಕುವ ಮೂಲಕ ದೇಶದ ಬಡವರು ಬದುಕಲು ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ, ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುವ ಮೂಲಕ ದೇಶವನ್ನು ಹಾಳುಗೆಡವುತ್ತಿದೆ,ಬದುಕನ್ನು ಕಟ್ಟಬೇಕಾದ ಮೋದಿ ಅವರು ಕೋಮು ಭಾವನೆ ಕೆರಳಿ, ಧರ್ಮ ಧರ್ಮದ ನಡುವೆ ಅಂತರ ನಿರ್ಮಿಸಿದ್ದಾರೆ ಎಂದು ಹೇಳಿದರು.
ಸಿಲಿಕಾನ್ ವ್ಯಾಲಿ ಇವತ್ತು ಯುಪಿ ಮಾಡಲ್ ಎಂದು ಮುಖ್ಯಮಂತ್ರಿ ಹೇಳುತ್ತಿದ್ದಾರೆ, ಅಭಿವೃದ್ಧಿ ಪಟ್ಟಿಯಲ್ಲಿ ಕೆಳಗಿರುವ ಉತ್ತರ ಪ್ರದೇಶದ ಮಾದರಿ ರಾಜ್ಯಕ್ಕೆ ಅವಶ್ಯಕತೆ ಇದೆಯೇ, ಬೇರೆಯವರು ನಮ್ಮ ಮಾದರಿಯನ್ನು ಅನುಸರಿಸುತ್ತಾರೆ, ನಮಗೇಕೆ ಬೇರೆಯವರ ಮಾದರಿ ಎಂದು ಪ್ರಶ್ನಿಸಿದ ಅವರು,ಕಾಂಗ್ರೆಸ್ ಸರಕಾರ ನುಡಿದಂತೆ ನಡೆದಿದ್ದೇವೆ, ಪ್ರಣಾಳಿಕೆಯಲ್ಲಿ ನೀಡಿದಂತಹ ಭರವಸೆಯನ್ನು ಈಡೇರಿಸಿದ್ದೇವೆ, ನಾಲೆ ಆಧುನೀಕರಣ 1000 ಕೋಟಿ, ಭದ್ರಾ ಮೇಲ್ದಂಡೆ ಯೋಜನೆ ಅನುದಾನ ನೀಡಿದ್ದೇವೆ, ಅಜ್ಜಂಪುರಕ್ಕೆ ಏತ ನೀರಾವರಿ ಯೋಜನೆಗೆ 850 ಕೋಟಿ ಅನುದಾನ ನೀಡಿ, ವಾಣಿ ವಿಲಾಸ ಸಾಗರಕ್ಕೆ ನೀರು ಹರಿಸುವ ಕೆಲಸ ಮಾಡಿದ್ದೇವೆ ಎಂದರು.