ಕಾರವಾರ: ಸಣ್ಣಪುಟ್ಟ ವಸ್ತುಗಳು, ಮನೆ-ಅಂಗಡಿಗಳಲ್ಲಿ ಕಳ್ಳತನವಾಗುವ ಬಗ್ಗೆ ನೀವೆಲ್ಲಾ ಕೇಳಿರಬಹುದು. ಆದರೆ ಪ್ರಯಾಣಿಕರಿಗಾಗಿ ನಿರ್ಮಿಸಲಾಗಿದ್ದ ಬಸ್ ತಂಗುದಾಣವನ್ನೇ ಕಳ್ಳತನ ಮಾಡಿರುವ ಬಗ್ಗೆ ಕೇಳಿದ್ದೀರಾ? ಇಂತಹ ಘಟನೆ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ತಿನೈಘಾಟ ಸಮೀಪದ ಪಿರೆಗಾಳಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಜೋಯಿಡಾ ತಾಲೂಕಿನ ಹಲವು ಕಡೆ ರುಡ್ ಸೆಟ್ ಸಂಸ್ಥೆಯವರು ಪ್ರಯಾಣಿಕರ ಅನುಕೂಲಕ್ಕಾಗಿ ಬಸ್ ನಿಲ್ದಾಣ ನಿರ್ಮಿಸಿದ್ದರು. ಅದರಂತೆ 3 ವರ್ಷದ ಹಿಂದೆ 2 ಲಕ್ಷ ರೂ. ವೆಚ್ಚದಲ್ಲಿ ಕಬ್ಬಿಣದ ಪೈಪ್ ಹಾಗೂ ಸ್ಟೀಲ್ ಕಂಬಿಗಳನ್ನು ಬಳಸಿ ತಿನೈಘಾಟ್‌ನ ಪಿರೆಗಾಳಿ ಗ್ರಾಮದಲ್ಲಿಯೂ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗಿತ್ತು.
ಆದರೆ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿ ಪ್ರಾರಂಭವಾದ ಬಳಿಕ ಬಸ್ ನಿಲ್ದಾಣ ಮುಖ್ಯರಸ್ತೆಯಿಂದ ದೂರವಾಗಿತ್ತು. ಬಳಿಕ ಈ ನಿಲ್ದಾಣಕ್ಕೆ ಪ್ರಯಾಣಿಕರು ಬಂದು ನಿಲ್ಲುವುದು ಕಡಿಮೆಯಾಯಿತು. ಹೀಗಾಗಿ ಈ ಅವಕಾಶವನ್ನು ಬಳಸಿಕೊಂಡ ಕಳ್ಳರು ನಿಲ್ದಾಣದ ಕಬ್ಬಿಣದ ಪೈಪ್ ಸೇರಿ ನೆಲಕ್ಕೆ ಹಾಕಿದ ಟೈಲ್ಸ್ ಸಹ ಬಿಡದೇ ಇಡೀ ನಿಲ್ದಾಣವನ್ನು ಕದ್ದು ಪರಾರಿಯಾಗಿದ್ದಾರೆ. ಹೆದ್ದಾರಿಯಲ್ಲಿ ಸೇತುವೆ ನಿರ್ಮಾಣಕ್ಕೆ ಹಾಕಿದ ಕಬ್ಬಿಣವನ್ನು ಸಹ ಕಳ್ಳರು ಕದ್ದೊಯ್ದಿದ್ದಾರೆ.