ಧಾರವಾಡ: ನಗರದ ಹೊರವಲಯದ ಬೈಪಾಸ್‌ನಲ್ಲಿ ಖಾಸಗಿ ಬಸ್ ಮತ್ತು ಲಾರಿ ನಡುವೆ ಗುರುವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟು, ನಾಲ್ವರು ಪ್ರಯಾಣಿಕರು ಗಾಯಗೊಂಡಿದ್ದಾರೆ.
ಬೀದರ್ ಜಿಲ್ಲೆಯ ಬಾಲ್ಕಿಯ ಮುರುದಾ ಖಾನ್ ಗಲ್ಲಿಯ ನಿವಾಸಿ ಶ್ಯಾಮ ವಿದ್ಯಾವಾನ ಪಾಟೀಲ (35) ಮೃತಪಟ್ಟವರು.
ಶ್ಯಾಮ ಅವರು ಅಪಘಾತಕ್ಕೀಡಾದ ಎಸ್‌ಆರ್‌ಎಸ್ ಬಸ್‌ನ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದರು.
ಮಹಾರಾಷ್ಟ್ರದ ರತ್ನಪುರದ ನಿವಾಸಿ ವಿನಾಯಕ ದೋಗಡೆ (34) ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಇಲ್ಲಿನ ಕಿಮ್ಸ್‌ಗೆ ದಾಖಲಿಸಲಾಗಿದೆ.
’24 ಪ್ರಯಾಣಿಕರಿದ್ದ ಬಸ್ ಮುಂಬೈನಿಂದ ಬೆಂಗಳೂರು ಕಡೆ ಹೊರಟಿತ್ತು. ಮುಂದೆ ಹೋಗುತ್ತಿದ್ದ ವಾಹವನ್ನು ಬಸ್‌ನ ಚಾಲಕ ಹಿಂದಿಕ್ಕುವ ಸಂದರ್ಭದಲ್ಲಿ ಎದುರಿನಿಂದ ಬರುತ್ತಿದ್ದ ಲಾರಿಗೆ ಡಿಕ್ಕಿಯಾಗಿದೆ. ಶ್ಯಾಮ ಅವರು ಸ್ಥಳದಲ್ಲೇ ಮೃತಪಟ್ಟರೆ, ವಿನಾಯಕ ಅವರ ಸ್ಥಿತಿ ಗಂಭೀರವಾಗಿದೆ. ಇನ್ನೂ ಮೂವರು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತ ಸಂಭವಿಸಿದ್ದರಿಂದ ಬೈಪಾಸ್‌ನಲ್ಲಿ ಸುಮಾರು ಮೂರು ಗಂಟೆಗೂ ಹೆಚ್ಚು ಕಾಲ ವಾಹನ ದಟ್ಟಣೆ ಉಂಟಾಗಿತ್ತು. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.