Breaking News

ಶೇ 40 ಲಂಚ… ಸಿದ್ದರಾಮಯ್ಯ ಡ್ರಾಮಾ: ಸಂಪುಟ ಸಭೆಯಲ್ಲಿ ಚರ್ಚೆ

Spread the love

ಬೆಂಗಳೂರು: ‘ಹಿಂದುತ್ವ, ಕೊಡಗು ಚಲೋ ವಿಚಾರದಲ್ಲಿ ಹಿನ್ನಡೆ ಆದ ಬೆನ್ನಲ್ಲೇ ಸಿದ್ದರಾಮಯ್ಯ ಅಂಡ್‌ ಕಂಪನಿ ಶೇ 40 ಕಮಿಷನ್‌ ವಿಚಾರವನ್ನು ಮುನ್ನೆಲೆಗೆ ತಂದು ಡ್ರಾಮಾ ಮಾಡ್ತಾ ಇದ್ದಾರೆ. ಇದು ಚುನಾವಣಾ ತಂತ್ರದ ಭಾಗವಾಗಿದ್ದು, ಇದಕ್ಕೆ ಪಕ್ಷ ಮತ್ತು ಸರ್ಕಾರ ತಿರುಗೇಟು ನೀಡಬೇಕು’ ಎಂದು ಸಚಿವ ಸಂಪುಟ ಸಭೆಯಲ್ಲಿ ಬಹುತೇಕ ಸಚಿವರು ಅಭಿಪ್ರಾಯ ವ್ಯಕ್ತಪಡಿಸಿದ್ದಾಗಿ ಗೊತ್ತಾಗಿದೆ.

 

‘ವರ್ಷದ ಹಿಂದೆಯೇ ಶೇ 40 ಕಮಿಷನ್‌ ವಿಷಯವನ್ನು ತೇಲಿ ಬಿಡಲಾಯಿತು. ಕೆಂಪಣ್ಣ ಅವರನ್ನು ಇದಕ್ಕೆ ಸಾಧನವಾಗಿ ಬಳಸಿಕೊಳ್ಳಲಾಗುತ್ತಿದೆ. ಸಿದ್ದರಾಮಯ್ಯ ಅವರ ಈ ಪ್ರಯತ್ನಕ್ಕೆ ಅವರ ಪಕ್ಷದಲ್ಲೇ ಒಂದು ವರ್ಗ ಸಾಥ್ ನೀಡುತ್ತಿಲ್ಲ. ಇದು ನಮಗೆ ಅನುಕೂಲಕರ ವಿಚಾರ ಎಂದು ಕೆಲವರು ಹೇಳಿದರು’ ಎಂದು ಮೂಲಗಳು ತಿಳಿಸಿವೆ.

‘ಕೆಂಪಣ್ಣ ಅವರ ಹೆಗಲ ಮೇಲೆ ಕೋವಿ ಇಟ್ಟು ಆರೋಪಗಳ ಗುಂಡು ಹಾರಿಸುವ ಕಾಂಗ್ರೆಸ್‌ಗೆ ತಕ್ಕ ಉತ್ತರ ನೀಡಬೇಕು. ಲೋಕಾಯುಕ್ತ ಅಥವಾ ನ್ಯಾಯಾಲಯಕ್ಕೆ ದೂರು ಸಲ್ಲಿಸುವಂತೆ ಒತ್ತಡ ಹೇರಬೇಕು’ ಎಂಬ ಸಲಹೆಯನ್ನೂ ನೀಡಲಾಗಿದೆ ಎಂದು ಮೂಲಗಳು ಹೇಳಿವೆ.

ಯಾರ್ರೀ ಕೆಂಪಣ್ಣ?:

ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಜೆ.ಸಿ.ಮಾಧುಸ್ವಾಮಿ, ಸಚಿವ ಸಂಪುಟ ಸಭೆಯಲ್ಲಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಸರ್ಕಾರದ ವಿರುದ್ಧ ಮಾಡಿರುವ ಆರೋಪಗಳ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಯಿತು ಎಂದು ತಿಳಿಸಿದರು.

‘ಈ ಕೆಂಪಣ್ಣ ಯಾರ್ರೀ? ಅವರು ಎಲ್ಲಿ ಗುತ್ತಿಗೆ ಮಾಡಿದ್ದಾರೆ? ಗುತ್ತಿಗೆ ಮಾಡಿದ್ದಕ್ಕೆ ದಾಖಲೆ ಇದೆಯೇ? 224 ಶಾಸಕರ ವಿರುದ್ಧವೂ ಕಮಿಷನ್‌ ಪಡೆಯುವ ಆರೋಪ ಮಾಡಿದ್ದಾರೆ. ಇದು ಜನಪ್ರತಿನಿಧಿಗಳಿಗೆ ಮಾಡಿರುವ ಅಪಮಾನ ಮಾತ್ರವಲ್ಲ, ಜನರಲ್ಲಿ ಅಪನಂಬಿಕೆ ಹುಟ್ಟಿಸುವ ಕೆಲಸ ಮಾಡಿದ್ದಾರೆ. ಇವರ ಬಳಿ ದಾಖಲೆಗಳು ಇದ್ದರೆ ನ್ಯಾಯಾಲಯಕ್ಕಾದರೂ ಕೊಡಲಿ, ಲೋಕಾಯುಕ್ತಕ್ಕಾದರೂ ಸಲ್ಲಿಸಲಿ. ಕಡೆ ಪಕ್ಷ ಮಾಧ್ಯಮಗಳಲ್ಲಿ ದಾಖಲೆ ಏಕೆ ಬಿಡುಗಡೆ ಮಾಡಿಲ್ಲ’ ಎಂದು ಅವರು ಪ್ರಶ್ನಿಸಿದರು.

‘ಸಿದ್ದರಾಮಯ್ಯ ಅವರ ಕಾಲದಲ್ಲೂ ಕಮಿಷನ್‌ ವ್ಯವಹಾರ ನಡೆದಿತ್ತು ಎಂದೂ ಅವರು ಹೇಳಿದ್ದಾರೆ. ಯಾವುದೇ ನಿಖರ ಮಾಹಿತಿ ಇದ್ದರೆ ಅದನ್ನು ಬಹಿರಂಗಪಡಿಸಲು ಸಮಸ್ಯೆ ಏನು? ಸರಾಸಗಟು ಭ್ರಷ್ಟರು ಎಂದು ತೇಜೋವಧೆ ಮಾಡುವುದು ಸರಿಯಲ್ಲ’ ಎಂದು ಮಾಧುಸ್ವಾಮಿ ಕಿಡಿಕಾರಿದರು.


Spread the love

About Laxminews 24x7

Check Also

ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ನಿಷೇಧ:

Spread the loveಬೆಂಗಳೂರು: ಆನ್​ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್​ಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಹೊಸ ಮಸೂದೆಯನ್ನು ರೂಪಿಸಿದೆ.‌ ಕರ್ನಾಟಕ ಪೊಲೀಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ