ಬೆಂಗಳೂರು: ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆ ಸೇರಿದಂತೆ ಆಸುಪಾಸಿನ ಜಿಲ್ಲೆಗಳಲ್ಲಿ 35 ಸಾವಿರಕ್ಕೂ ಅಧಿಕ ಹಾವುಗಳನ್ನು ರಕ್ಷಣೆ ಮಾಡಿ, ಸ್ನೇಕ್ ಲೋಕೇಶ್ ಎಂದೇ ಪ್ರಸಿದ್ಧಿ ಪಡೆದಿದ್ದ ನೆಲಮಂಗಲದ ಸ್ನೇಕ್ ಲೋಕೇಶ್ ಮೃತಪಟ್ಟಿದ್ದಾರೆ.
ಹಾವು ಕಡಿತದಿಂದಲೇ ಅವರು ದಾರುಣ ಅಂತ್ಯ ಕಂಡಿದ್ದಾರೆ!
ನೆಲಮಂಗಲ ತಾಲೂಕಿನ ಡಾಬಸ್ ಪೇಟೆಯಲ್ಲಿ ಕಳೆದ ಜುಲೈ 17ರಂದು ಸ್ನೇಕ್ ಲೋಕೇಶ್ ಬಲಗೈ ಬೆರಳಿಗೆ ವಿಷಪೂರಿತ ನಾಗರಹಾವು ಕಚ್ಚಿತ್ತು. ಅವರನ್ನು ನೆಲಮಂಗಲದ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ತುರ್ತು ಚಿಕಿತ್ಸೆ ಕೊಡಿಸಿ ನಂತರ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಿಸದೇ ಅವರು ಇಂದು ಮೃತಪಟ್ಟಿದ್ದಾರೆ.
ಮೂಟೆ ಕೆಳಗೆ ಅವಿತಿದ್ದ ಹಾವನ್ನು ಬರಿಗೈಲಿ ರಕ್ಷಿಸುವಾಗ ಅದು ಕಚ್ಚಿತ್ತು. ಚಿಕಿತ್ಸೆ ವೇಳೆ ಲೋಕೇಶ್ ಅವರ ಮಿದುಳು ನಿಷ್ಕ್ರಿಯಗೊಂಡಿತ್ತು ಎನ್ನಲಾಗಿದೆ. ಇಲ್ಲಿಯವರೆಗೂ ಸ್ನೇಕ್ ಲೋಕೇಶ್ ಅವರು, 35 ಸಾವಿರಕ್ಕೂ ಹೆಚ್ಚು ವಿವಿಧ ಜಾತಿಯ ಉರಗಗಳು, ಪ್ರಾಣಿ, ಪಕ್ಷಿಗಳನ್ನು ರಕ್ಷಣೆ ಮಾಡಿದ್ದಾರೆ.
ನೆಲಮಂಗಲದಲ್ಲಿ ಪುಟ್ಟ ಹೋಟೆಲ್ ಇಟ್ಟುಕೊಂಡು ಜೀವನ ನಡೆಸುತ್ತಿದ್ದ ಲೋಕೇಶ್, ಕೆಲವು ಧಾರವಾಹಿ, ಕೆಲ ಚಿತ್ರಗಳಲ್ಲಿ ಕೂಡ ನಟಿಸಿದ್ದಾರೆ.
Laxmi News 24×7