ನವದೆಹಲಿ: ಮಾನವಶಾಸ್ತ್ರದ ಪ್ರಕಾರ ದೇವರುಗಳು ಮೇಲ್ಜಾತಿಗೆ ಸೇರಿದವರಲ್ಲ. ಶಿವನೂ ಕೂಡ ಪರಿಶಿಷ್ಟ ಜಾತಿ ಅಥವಾ ಬುಡಕಟ್ಟಿನವನಾಗಿರಬಹುದು ಎಂದು ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ (ಜೆಎನ್‌ಯು)ನ ಕುಲಪತಿ ಶಾಂತಿಶ್ರೀ ಧೂಳಿಪುಡಿ ಪಂಡಿತ್ ಅವರು ಸೋಮವಾರ ಅಭಿಪ್ರಾಯಪಟ್ಟಿದ್ದಾರೆ.
ಡಾ. ಬಿ ಆರ್ ಅಂಬೇಡ್ಕರ್ ಉಪನ್ಯಾಸ ಸರಣಿಯ ಅಂಗವಾಗಿ ಆಯೋಜಿಸಿದ್ದ ‘ಲಿಂಗ ನ್ಯಾಯದ ಕುರಿತು ಡಾ. ಬಿ. ಆರ್. ಅಂಬೇಡ್ಕರ್ ಅವರ ಚಿಂತನೆಗಳು: ಏಕರೂಪ ನಾಗರಿಕ ಸಂಹಿತೆಯ ವಿಶ್ಲೇಷಣೆ’ ಎಂಬ ವಿಷಯದ ಕುರಿತು ಅವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
‘ಮನುಸ್ಮೃತಿಯ ಪ್ರಕಾರ ಎಲ್ಲಾ ಸ್ತ್ರೀಯರು ಶೂದ್ರರು. ಆದ್ದರಿಂದ ಯಾವುದೇ ಮಹಿಳೆ ತಾನು ಬ್ರಾಹ್ಮಣ ಅಥವಾ ಇನ್ನಿತರೆ ಎಂದು ಯಾವುದನ್ನಾದರೂ ಒಂದನ್ನು ಹೇಳಿಕೊಳ್ಳಲು ಸಾಧ್ಯವಿಲ್ಲ. ಮದುವೆಯ ಮೂಲಕ ಗಂಡನಿಂದ ಅಥವಾ ತಂದೆಯಿಂದ ಮಾತ್ರ ಅವರಿಗೆ ಜಾತಿ ಎಂಬುದು ಸಿಗುತ್ತದೆ. ಇದು ಅಸಾಧಾರಣವಾದ ಕಡೆಗಣನೆ ಎಂದು ನಾನು ಭಾವಿಸುತ್ತೇನೆ’ ಎಂದು ಅವರು ಹೇಳಿದರು.
ರಾಜಸ್ಥಾನದಲ್ಲಿ ಒಂಬತ್ತು ವರ್ಷದ ದಲಿತ ಬಾಲಕನನ್ನು ಹೊಡೆದು ಕೊಂದ ಇತ್ತೀಚಿನ ಜಾತಿ ಸಂಬಂಧಿತ ಕ್ರೌರ್ಯದ ಕುರಿತು ಮಾತನಾಡಿದ ಅವರು, ‘ಯಾವುದೇ ದೇವರುಗಳೂ ಮೇಲ್ಜಾತಿಗೆ ಸೇರಿಲ್ಲ’ ಎಂದು ಅಭಿಪ್ರಾಯಪಟ್ಟರು.