ಬೆಳಗಾವಿ – ಚಿರತೆ ಆತಂಕದ ಹಿನ್ನೆಲೆಯಲ್ಲಿ ಬೆಳಗಾವಿಯ 22 ಶಾಲೆಗಳು ಕಳೆದ ಹಲವು ದಿನಗಳಿಂದ ಶೈಕ್ಷಿಣಿಕವಾಗಿ ತೀವ್ರ ಗೊಂದಲದಲ್ಲಿವೆ. ರಜೆ ಕೊಡದಿದ್ದರೆ ಚಿರತೆ ದಾಳಿಯಿಂದ ಮಕ್ಕಳಿಗೆ ತೊಂದರೆಯಾದರೆ ಎನ್ನುವ ಆತಂಕ, ರಜೆ ಕೊಟ್ಟರೆ ಪಾಠವಿಲ್ಲದೆ ಮಕ್ಕಳ ಭವಿಷ್ಯದ ಚಿಂತೆ.
ಆರಂಭದಲ್ಲಿ ಒಂದು ವಾರ ರಜೆ ನೀಡಿದ್ದ ಶಿಕ್ಷಣ ಇಲಾಖೆ ನಂತರ ಎಲ್ಲ ಮುನ್ನೆಚ್ಚರಿಕೆ ವಹಿಸಿಕೊಂಡು ಶಾಲೆಗಳನ್ನು ನಡೆಸುವಂತೆ ಸೂಚನೆ ನೀಡಿತ್ತು. ಆದರೆ ಸೋಮವಾರ ಮತ್ತೆ ಚಿರತೆ ಕಾಣಿಸಿಕೊಂಡು ಆತಂಕ ಸೃಷ್ಟಿಸಿದೆ. ಹಾಗಾಗಿ ಸೋಮವಾರ ನಗರ ವಲಯದ 13 ಹಾಗೂ ಗ್ರಾಮೀಣ ವಲಯದ 9 ಶಾಲೆಗಳಿಗೆ ರಜೆ ನೀಡಲಾಗಿತ್ತು.
ಚಿರತೆ ಇನ್ನೂ ಸಿಗದ ಹಿನ್ನೆಲೆಯಲ್ಲಿ ಮಂಗಳವಾರವೂ ಶಾಲೆಗಳನ್ನು ನಡೆಸುವುದು ಕಷ್ಟ. ಹಾಗಾಗಿ ಮಂಗಳವಾರ ಮಕ್ಕಳಿಗ ಆನ್ ಲೈನ್ ಪಾಠ ಮಾಡುವಂತೆ ಶಿಕ್ಷಣ ಇಲಾಖೆ ಶಿಕ್ಷಕರಿಗೆ ಸೂಚನೆ ನೀಡಿದೆ.
ಶಿಕ್ಷಕರು ಮಕ್ಕಳನ್ನು ಆನ್ ಲೈನ್ ಮೂಲಕ ಸಂಪರ್ಕಿಸಿ ಶೈಕ್ಷಣಿಕ ಚಟುವಟಿಕೆ ನಡೆಸಬೇಕು. ಮಕ್ಕಳಿಗೆ ಸಾಧ್ಯವಾದಷ್ಟು ಪಾಠಗಳನ್ನು ಮಾಡುವ ಜೊತೆಗೆ ಹೋಮ್ ವರ್ಕ್ ಗಳನ್ನು ನೀಡಬೇಕು. ಶಿಕ್ಷಣದಲ್ಲಿ ಯಾವುದೇ ರೀತಿ ಹಿಂದೆ ಬೀಳದಂತೆ ಸೂಕ್ತ ಕ್ರಮಗಳನ್ನು ತೆಗೆದುಕಳ್ಳಬೇಕು ಎಂದು ಇಲಾಖೆ ಸೂಚಿಸಿದೆ.
ಮಂಗಳವಾರ ರಜೆ ಎಂದು ತಿಳಿದುಕೊಳ್ಳದೆ ಇದ್ದಲ್ಲಿಂದಲೇ ಪಾಠಗಳನ್ನು ಹೇಳುವ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಮತ್ತು ಡಿಡಿಪಿಐ ಬಸವರಾಜ ನಾಲತವಾಡ ಸೂಚಿಸಿದ್ದಾರೆ ಎಂದು ನಗರ ಕ್ಷೇತ್ರ ಶಿಕ್ಷಣಾಧಿಕಾರಿ ರವಿ ಭಜಂತ್ರಿ ತಿಳಿಸಿದ್ದಾರೆ.