ಬೆಂಗಳೂರು :ಅನರ್ಹರ ಬಳಿಯಿದ್ದ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ ಗಳನ್ನು ಸರ್ಕಾರ ರದ್ದುಪಡಿಸಿದೆ. ಈ ಮೂಲಕ ಕಾರ್ಡ್ನಿಂದ ಸಿಗುತ್ತಿದ್ದ ಸರ್ಕಾರಿ ಮನೆ ಸೌಲಭ್ಯ, ಉಚಿತ ಆರೋಗ್ಯ ಸೇವೆ, ಆರ್ಟಿಇ ಸೀಟು ಇನ್ನಿತರ ಸರ್ಕಾರಿ ಸೌಲಭ್ಯಗಳು ಸ್ಥಗಿತಗೊಳ್ಳಲಿವೆ.
ಸುಳ್ಳು ದಾಖಲೆ ಸಲ್ಲಿಸಿ ಸರ್ಕಾರಿ ಸೌಲಭ್ಯ ಪಡೆಯುತ್ತಿದ್ದವರಿಗೆ ಕ್ರಿಮಿನಲ್ ಕೇಸ್ ಭೀತಿಯೂ ಶುರುವಾಗಿದೆ.
ರಾಜ್ಯಾದ್ಯಂತ ಆರ್ಥಿಕ ಸಬಲರು ಪಡೆದಿದ್ದ 3,30,024 ರೇಷನ್ ಕಾರ್ಡ್ ಗಳು ರದ್ದಾಗಿವೆ. ಇದರಲ್ಲಿ 21,679 ಅಂತ್ಯೋದಯ ಮತ್ತು 3,08,345 ಬಿಪಿಎಲ್ ಚೀಟಿಗಳಿವೆ. ಪಡಿತರ ಚೀಟಿಗೆ ಅನರ್ಹರಿದ್ದರೂ ಇಲಾಖೆಗೆ ತಪುಪ ಮಾಹಿತಿ ನೀಡಿ ಕಾರ್ಡ್ ಪಡೆದು ಉಚಿತವಾಗಿ ಅಕ್ಕಿ, ಗೋಧಿ, ರಾಗಿ, ಸಕ್ಕರೆ ಮತ್ತು ತಾಳೆ ಎಣ್ಣೆ ಇತರೆ ಪದಾರ್ಥ ಪಡೆದುಕೊಂಡಿದ್ದರು. ಕಾರ್ಡ್
ವಾಪಸ್ ನೀಡದಿದ್ದಲ್ಲಿ ಸರ್ಕಾರವೇ ಪತ್ತೆಹಚ್ಚಿ ಪಡಿತರ ಪಡೆದುಕೊಳ್ಳುತ್ತಿದ್ದ ದಿನದಿಂದ ಈವರೆಗೆ ಎಷ್ಟು ಆಹಾರ ಪದಾರ್ಥಗಳನ್ನು ಪಡೆದಿದ್ದಾರೆ ಎಂಬುದನ್ನು ಲೆಕ್ಕ ಮಾಡಿ ಕೆಜಿಗೆ 35 ರೂ.ನಂತೆ ವಸೂಲಿ ಮಾಡುವುದಲ್ಲದೆ ಕ್ರಿಮಿನಲ್ ಕೇಸ್ ದಾಖಲಿಸಲಿದೆ.
ಸೀಟ್ಗಾಗಿ ಸುಳ್ಳು ಮಾಹಿತಿ: ಶಿಕ್ಷಣ ಹಕ್ಕು ಕಾಯ್ದೆಯಡಿ (ಆರ್ಟಿಇ) ಖಾಸಗಿ ಶಾಲೆಗಳಲ್ಲಿ ಶೇ.25 ಸೀಟುಗಳನ್ನು ಬಡಮಕ್ಕಳಿಗೆ ಮೀಸಲಿಡಲಾಗಿದೆ. ಬಿಪಿಎಲ್ ಕಾರ್ಡ್ ಅಥವಾ ಅಂತ್ಯೋದಯ ಕಾರ್ಡ್ ಹೊಂದಿರುವವರ ಮಕ್ಕಳಿಗೆ ಆದ್ಯತೆ. ಆದರೆ, ಆರ್ಥಿಕ ಸಬಲರಿದ್ದರೂ ಖೊಟ್ಟಿ ದಾಖಲೆ ಸಲ್ಲಿಸಿ ಬಿಪಿಎಲ್ ಕಾರ್ಡ್ ಪಡೆದು ಆರ್ಟಿಇ ಅನ್ವಯ ಉಚಿತ ಸೀಟ್ ಪಡೆದುಕೊಂಡವರ ಸಂಖ್ಯೆ ದೊಡ್ಡದಿದೆ.
ಕಾರಿರುವ ಕುಟುಂಬಗಳಿಗೆ ನೋಟಿಸ್: ಕುಟುಂಬದ ಸದಸ್ಯರಲ್ಲಿ ಯಾರಾದರೂ ಸ್ವಂತ ಕಾರು ಬಳಸುತ್ತಿದ್ದರೆ ಅಂಥವರ ಕಾರ್ಡ್ಗಳನ್ನು ಇಲಾಖೆ ಡಿಲೀಟ್ ಮಾಡುತ್ತಿದೆ. ಇಂಥ ಕುಟುಂಬಗಳಿಗೆ ಇಲಾಖೆ ನೋಟಿಸ್ ನೀಡುತ್ತದೆ. ನೋಟಿಸ್ ತಲುಪಿ 7 ದಿನದೊಳಗೆ ಲಿಖಿತ ಉತ್ತರ ನೀಡುವ ಜತೆಗೆ ದಂಡ ಕಟ್ಟಬೇಕು. ಒಟ್ಟಾರೆ 12,584 ಕುಟುಂಬಗಳಿಗೆ ಈವರೆಗೆ ಇಲಾಖೆ ನೋಟಿಸ್ ನೀಡಿದೆ.
ಯಾರು ಅನರ್ಹರು?: ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟೇರ್ಗಿಂತ ಹೆಚ್ಚು ಒಣಭೂಮಿ ಅಥವಾ ನೀರಾವರಿ ಭೂಮಿ, ನಗರ ಪ್ರದೇಶಗಳಲ್ಲಿ 1 ಸಾವಿರ ಚದರಡಿಗಿಂತ ಹೆಚ್ಚು ವಿಸ್ತೀರ್ಣದ ಸ್ವಂತ ಮನೆ, ವಾರ್ಷಿಕ -ಠಿ;1.20 ಲಕ್ಷಕ್ಕಿಂತ ಹೆಚ್ಚು ಆದಾಯ ಹಾಗೂ ಜೀವನೋ ಪಾಯಕ್ಕಾಗಿ ಸ್ವಂತ ವಾಣಿಜ್ಯ ವಾಹನ ಅಂದರೆ ಟ್ರಾಯಕ್ಟರ್, ಮ್ಯಾಕ್ಸಿಕ್ಯಾಬ್, ಟ್ಯಾಕ್ಸಿ ಹೊರತುಪಡಿಸಿ ನಾಲ್ಕು ಚಕ್ರ ವಾಹನ, ಕಾರು ಹೊಂದಿರುವವರು (ವೈಟ್ ಬೋರ್ಡ್), ಜಿಎಸ್ಟಿ, ಆದಾಯ ತೆರಿಗೆ ಪಾವತಿ ಸುವವರು ಸರ್ಕಾರಿ ಸೌಲಭ್ಯ ಪಡೆಯುವಂತಿಲ್ಲ.