ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಸರಕಾರ ಜಾರಿಗೆ ತರುವ ಸಾಲಸೌಲಭ್ಯಗಳನ್ನು ಕಲ್ಪಿಸಲು ಬ್ಯಾಂಕುಗಳು ಸಹಕರಿಸಬೇಕು. ವಿನಾಕಾರಣ ನೆಪವೊಡ್ಡಿ ಸೌಲಭ್ಯ ನಿರಾಕರಿಸಬಾರದು ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ನಿರ್ದೇಶನ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ (ಆ.16) ನಡೆದ ಪ್ರಧಾನಮಂತ್ರಿಗಳ 15 ಅಂಶಗಳ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ 15 ಅಂಶಗಳ ಕಾರ್ಯಕ್ರಮಗಳಡಿ ಜಿಲ್ಲೆಗೆ ಒಟ್ಟಾರೆ 408 ಕೋಟಿ ರೂಪಾಯಿ ಅನುದಾನ ಹಾಗೂ ಸಾಲ-ಸೌಲಭ್ಯಗಳನ್ನು ಸರಕಾರ ನೀಡುತ್ತಿದ್ದು, ಇದನ್ನು ಬಳಸಿಕೊಂಡು ಆರ್ಥಿಕ ಪ್ರಗತಿ ಯಾಕೆ ಸಾಧಿಸುತ್ತಿಲ್ಲ ಎಂದು ಕಡಾಡಿ ಪ್ರಶ್ನಿಸಿದರು.
ಈಗಾಗಲೇ ಜಿಲ್ಲೆಯಲ್ಲಿ ಡಿಸಿಸಿ ಬ್ಯಾಂಕ್ ನಿಂದ 365 ಕೋಟಿ ಸಾಲ ಕಲ್ಪಿಸುವ ಗುರಿ ಇದ್ದು, ಅದರಂತೆ 368 ಕೋಟಿ ಸಾಲ ಸೌಲಭ್ಯ ನೀಡಲಾಗಿದೆ ಎಂದು ಡಿಸಿಸಿ ಬ್ಯಾಂಕ್ ಗುರಿ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಅದೇ ರೀತಿ ಸಾಲ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಲು, ತಾಂತ್ರಿಕ ದೋಷಗಳು ಎದುರಾಗದಂತೆ ಸಂಭಂದಿಸಿದ ವೆಬ್ ಸೈಟ್ ಮಾರ್ಪಡಿಸಬೇಕು. ಬಾಕಿ ಇರುವ ಅರ್ಜಿಗಳನ್ನು 15 ದಿನಗಳ ಒಳಗಾಗಿ ಪೂರ್ಣಗಳಿಸಿಬೇಕು ಎಂದು ತಿಳಿಸಿದರು.