ವಿಜಯಪುರ: ಶಿವಮೊಗ್ಗದಲ್ಲಿ ವೀರ ಸಾವರ್ಕರ್ ಪೋಸ್ಟರ್ ಹರಿದ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ, ಕೆಲವು ಜನರಿಗೆ ಇತಿಹಾಸದ ಬಗ್ಗೆ ಮಾಹಿತಿ ಇರುವುದಿಲ್ಲ. ಎರಡು ಸಲ ಕಾಳಾ ಪಾನಿ ಶಿಕ್ಷೆಯನ್ನು ವೀರ ಸಾವರ್ಕರ್ ಅನುಭವಿಸಿದ್ದರು. ಅಂಡಮಾನ್ ನಿಕೋಬಾರ್ ಜೈಲಿಗೆ ಹೋದರೆ ಸಾವರ್ಕರ್ ಬಗ್ಗೆ ತಿಳಿಯುತ್ತದೆ ಎಂದು ಹೇಳುವ ಮೂಲಕ ಸಾವರ್ಕರ್ ವಿರೋಧಿಗಳಿಗೆ ಮಾತಿನಲ್ಲೇ ತಿವಿದರು.
ಕೆಲ ವರು ಅಪ್ರಬುದ್ಧರಿರುತ್ತಾರೆ. ಅವರಿಗೆ ಇದರ ಬಗ್ಗೆ ಗೊತ್ತಿರುವುದಿಲ್ಲ. ಇತಿಹಾಸ ನೆನಪಿಸಿಕೊಡಲು ಪ್ರಧಾನಮಂತ್ರಿ ಈ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಕೆಲಸವಾಗಿದೆ. ಒಂದು ವೇಳೆ ರಾಹುಲ್ ಗಾಂಧಿ ಸಾವರ್ಕರ್ ಬಳಿ ಇದ್ದಿದ್ದರೆ, ಒಂದೇ ತಾಸಿನಲ್ಲಿ ಶರಣಾಗಿ ಇಟಲಿಗೆ ಹೋಗುತ್ತಿದ್ರು ಎಂದು ವ್ಯಂಗ್ಯವಾಡಿದರು.
ಮಾಜಿ ಸಿಎಂ ಯಡಿಯೂರಪ್ಪ ರಾಜ್ಯಾದ್ಯಂತ ಪ್ರವಾಸ ಮಾಡುವ ವಿಚಾರವಾಗಿ ಯತ್ನಾಳ ಪ್ರತಿಕ್ರಿಯಿಸಿ, ರಾಜ್ಯಾದ್ಯಂತ ಬೇಕಾದ್ರೂ ಓಡಾಡಲಿ, ಮನೇಲಿ ಬೇಕಾದ್ರು ಓಡಾಡಲಿ. ಯಾರು ಓಡಾಡಬೇಕು ಅನ್ನೋದು ಪಕ್ಷ ನಿರ್ಧಾರ ಮಾಡುತ್ತದೆ ಎಂದು ಹೇಳಿದರು.