ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿದೆ. ರಾಜ್ಯದಲ್ಲಿ ಹತ್ಯೆಯಂತಹ ಘಟನೆ ನಡೆಯುತ್ತಿದ್ದರೂ ಗೃಹ ಸಚಿವರೇ ಗಂಭೀರವಾಗಿ ಗಮನಿಸುತ್ತಿಲ್ಲ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಬಿಜೆಪಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಆರೋಪಿಸಿದರು.
ಗೋಕಾಕ್‍ನಲ್ಲಿ ಶನಿವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಸತೀಶ ಜಾರಕಿಹೊಳಿ ಅವರು, ಬಿಜೆಪಿ ಸರ್ಕಾರ ಮುಂಬರುವ ಚುನಾವಣೆ ತಯಾರಿಯಲ್ಲಿದೆ. ಸರ್ಕಾರವನ್ನು ಯಾವ ರೀತಿ ನಡೆಸಬೇಕು ಎನ್ನುವ ಚಿಂತನೆ ಬಿಜೆಪಿ ನಾಯಕರಿಗಿಲ್ಲ. ಹತ್ಯೆ ಪ್ರಕರಣದಲ್ಲಿ ಹಿಂದೂ, ಮುಸ್ಲಿಂ ಎಂಬ ತಾರತಮ್ಯ ಮಾಡಲಾಗುತ್ತಿದೆ. ಬಿಜೆಪಿ ಕಾರ್ಯಕರ್ತರ ಹತ್ಯೆಯಾದರೆ 25 ಲಕ್ಷ ಪರಿಹಾರ ನೀಡಲಾಗುತ್ತಿದೆ.
ಆದರೆ, ಬೇರೆ ಧರ್ಮದವರಿಗೆ ಒಂದು ರೂಪಾಯಿಯನ್ನು ಕೊಟ್ಟಿಲ್ಲ. ಪರಿಹಾರ ವಿತರಣೆಯಲ್ಲಿಯೂ ತಾರತಮ್ಯ ಮಾಡಲಾಗುತ್ತಿದೆ. ಈ ವಿಚಾರದಲ್ಲಿ ಕಾಂಗ್ರೆಸ್ ಹೋರಾಟ ಮಾಡುವುದಿಲ್ಲ.
ಜನಜಾಗೃತಿ ಮೂಡಿಸಲಾಗುವುದು. ಇದು ಜನರ ಹೋರಾಟವಾಗಬೇಕು. ಬಿಜೆಪಿ ಸರ್ಕಾರದ ಬಗ್ಗೆ ಬಿಜೆಪಿಯವರೇ ಹೋರಾಟ ಮಾಡುತ್ತ, ಆಕ್ರೋಶ ವ್ಯಕ್ತಪಡಿಸುತ್ತಾರೆ. ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಕೊಡಿಸುವ ಬದಲಾಗಿ ಚುನಾವಣೆಯಲ್ಲಿ ಓಟ ಬ್ಯಾಂಕ್ ಸೃಷ್ಟಿಸಲು ಪ್ರಯತ್ನ ಮಾಡುತ್ತಿದ್ದಾರೆ.
ಸರ್ಕಾರ ಹಿಂದು, ಮುಸ್ಲಿಂ, ಎಸ್‍ಸಿ, ಎಸ್‍ಟಿ ಎನ್ನದೇ ಎಲ್ಲ ಸಮುದಾಯಗಳನ್ನು ಒಂದೇ ತಟ್ಟೆಯಲ್ಲಿ ಸಮಾನ ರೀತಿಯಾಗಿ ನೋಡಬೇಕು ಎಂದು ಎಚ್ಚರಿಸಿದರು.