ಬೆಳಗಾವಿ: ಯುವತಿಯೊಬ್ಬರ ಫೋಟೊ ಬಳಸಿ, ಫೇಸ್‌ಬುಕ್ ಖಾತೆ ಸೃಷ್ಟಿಸಿ ₹ 20 ಲಕ್ಷ ಹಣ ಕಬಳಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ನಿಪ್ಪಾಣಿ ತಾಲ್ಲೂಕಿನ ನಾಯಿಂಗ್ಲಜ್ ಗ್ರಾಮದ ನಿವಾಸಿ ಮಹಾಂತೇಶ ಮೂಡಸೆ ಬಂಧಿತ ಆರೋಪಿ.
ಬೆಳಗಾವಿ ಮೂಲದ, ಸದ್ಯ ದುಬೈನಲ್ಲಿ ವಾಸವಾಗಿರುವ ಯುವತಿಯ ಕೆಲವು ಫೋಟೊಗಳನ್ನು ಫೇಸ್‌ಬುಕ್‌ನಿಂದಲೇ ಡೌನ್‌ಲೋಡ್ ಮಾಡಿಕೊಂಡ ಆರೋಪಿ, ಎಂ.ಸ್ನೇಹಾ (ಬದಲಾಯಿಸಿದ ಹೆಸರು) ಎಂಬ ಹೆಸರಲ್ಲಿ ಖಾತೆ ಮಾಡಿದ್ದ. ಆ ಖಾತೆಯಿಂದಲೇ ಯುವಕರಿಗೆ, ವಯಸ್ಕರಿಗೆ ‘ಫ್ರೆಂಡ್ ರಿಕ್ವೆಸ್ಟ್’ ಕಳುಹಿಸುತ್ತಿದ್ದ. ಮಾತ್ರವಲ್ಲ; ಮೆಸೆಂಜರ್‌ನಲ್ಲಿ ಸಂಪರ್ಕ ಸಂಖ್ಯೆಗಳನ್ನೂ ಕೇಳಿ ಪಡೆಯುತ್ತಿದ್ದ.
ಮೂರು ವರ್ಷಗಳ ಹಿಂದೆ ಈ ಖಾತೆ ತೆರೆಯಲಾಗಿದೆ. ಈ ಫೇಸ್‌ಬುಕ್‌ನಲ್ಲಿ ಸ್ನೇಹಿತರಾದವರ ಸಂಖ್ಯೆ 5 ಸಾವಿರ ದಾಟಿದೆ. ಅವರಲ್ಲಿ ದಿನವೂ ಕೆಲವರಿಗೆ ಸಲುಗೆಯ, ಸರಸದ ಚಾಟಿಂಗ್ ಮಾಡುತ್ತಿದ್ದ. ಈ ಎಲ್ಲ ಮೆಸೇಜ್‌ಗಳೂ ಸ್ನೇಹಾ ಎಂಬ ಯುವತಿಯಿಂದ ಬರುತ್ತಿವೆ ಎಂದು ತಿಳಿದು ಯುವಕರು, ವಯಸ್ಕರು ಕೂಡ ಸಲುಗೆ ಬೆಳೆಸಿಕೊಂಡಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬಂಧಿತ ಆರೋಪಿ ಮಹಾಂತೇಶ ಮೂಡಸೆ
ಕೆಲವರ ಮೊಬೈಲ್ ಸಂಖ್ಯೆ ಪಡೆದು ಪ್ರತಿ ರಾತ್ರಿ ಚಾಟ್ ಮಾಡುತ್ತಿದ್ದ. ಹೀಗೆ ತನ್ನ ಮೊಬೈಲ್ ಡಿ.ಪಿ.ಯಲ್ಲೂ ಇದೇ ಯುವತಿಯ ಫೋಟೊ ಹಾಕುತ್ತಿದ್ದ.
ಹೀಗೆ ಸಂಪರ್ಕಕ್ಕೆ ಬಂದವರಲ್ಲಿ ಕೆಲವು ದಿನಗಳ ಸಲುಗೆಯ ನಂತರ, ತನಗೆ ಆರ್ಥಿಕ ಸಂಕಷ್ಟವಿದೆ ಎಂದು ಹಣ ಕೇಳುತ್ತಿದ್ದ. ‘ಗೆಳತಿ’ ಕಷ್ಟಕ್ಕೆ ನೆರವಾಗುತ್ತಿದ್ದೇನೆ ಎಂದು ತಿಳಿದು ಹಲವರು ಫೋನ್ ಪೇ, ಗೂಗಲ್ ಪೇ ಮೂಲಕ ಕೂಡ ಹಣ ಹಾಕಿದ್ದರು.
ಕೆಲವೊಬ್ಬರು ₹ 1,000ರಿಂದ ಹಿಡಿದು ₹ 50 ಸಾವಿರವರೆಗೂ ಹಣ ಹಾಕಿದ್ದಾರೆ. ಹೀಗೆ ಆರೋಪಿ ಕಬಳಿಸಿದ ಹಣ ಬರೋಬ್ಬರಿ ₹ 19 ಲಕ್ಷ ದಾಟಿದೆ.
‘ಎಂ.ಸ್ನೇಹಾ’ ಎಂಬ ಫೇಸ್‌ಬುಕ್ ಅಕೌಂಟ್‌ನಲ್ಲಿ ತನ್ನ ಫೋಟೊಗಳು ಇರುವುದು ಯುವತಿಗೆ ಗೊತ್ತಾಯಿತು. ಜುಲೈ 4ರಂದು ದುಬೈನಿಂದ ಬಂದ ಅವರು, ಇಲ್ಲಿನ ಸೈಬರ್ ಅಪರಾಧ ವಿಭಾಗದ ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣ ಭೇದಿಸಿದ ಸಿಇಎನ್ (ಸೈಬರ್ ಎಕೊನಾಮಿಕ್ ಅಫೆನ್ಸಿಸ್ ಅಂಡ್ ನಾಕೊಟಿಕ್ಸ್) ಪೊಲೀಸರು ಕೆಲವೇ ದಿನಗಳಲ್ಲಿ ಯುವಕನನ್ನು ಬಂಧಿಸಿದ್ದರು.
ಪಿಎಸ್‌ಐ ಆಗಲು ಸಿದ್ಧತೆ ನಡೆಸಿದ್ದ: ಸದ್ಯ ಬಂಧಿತನಾದ ಯುವಕ ಪಿಎಸ್‌ಐ ಆಗಲು ಸಿದ್ಧತೆ ನಡೆಸಿದ್ದ. ದೈಹಿಕ ಸಾಮರ್ಥ್ಯ ಪರೀಕ್ಷೆಯಲ್ಲೂ ಪಾಸಾಗಿದ್ದ. ಧಾರವಾಡದಲ್ಲಿ ಕೋಚಿಂಗ್ ಸೆಂಟರ್‌ವೊಂದರಲ್ಲಿ ತರಬೇತಿ ಪಡೆಯುತ್ತಿದ್ದ. ತನ್ನ ಖಾತೆಗೆ ಹಣ ಬಂದ ಮೇಲೆ ಗೋವಾ ಮತ್ತಿತರ ಸ್ಥಳಗಳಿಗೆ ತೆರಳಿ ದಿನಗಳನ್ನು ಕಳೆಯುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಹಣ ಹಾಕಿದವರು ಮರಳಿ ಕೇಳಿದರೆ ಅವರ ನಂಬರ್ ‘ಬ್ಲಾಕ್’ ಮಾಡುತ್ತಿದ್ದ. ತನ್ನ ನಂಬರ್‌ಗೆ ಯಾವುದೇ ಕರೆ ಬಂದರೂ ತೆಗೆಯುತ್ತಿರಲಿಲ್ಲ ಎಂದೂ ಮಾಹಿತಿ ನೀಡಿದ್ದಾರೆ.