ಉಳ್ಳಾಲ/ವಿಟ್ಲ/ಸುಳ್ಯ/ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಿಸಿದಂತೆ ಕರ್ನಾಟಕ ಮತ್ತು ಕೇರಳದ ಗಡಿಗಳಲ್ಲಿ ಇರುವ ಚೆಕ್ ಪೋಸ್ಟ್‌ಗಳು ಸುಸಜ್ಜಿತವಾಗದಿರುವುದು ಕರ್ನಾಟಕದಲ್ಲಿ ದುಷ್ಕೃತ್ಯ ಎಸಗಿ ಕೇರಳಕ್ಕೆ ಪರಾರಿಯಾಗುವ ದುಷ್ಕರ್ಮಿಗಳಿಗೆ ಸುಲಭದ ದಾರಿಯಾಗಿದೆ.
ಮಂಗಳವಾರ ಸುಳ್ಯದ ಬೆಳ್ಳಾರೆಯಲ್ಲಿ ಬಿಜೆಪಿ ಯುವ ಮೋರ್ಚಾದ ಕಾರ್ಯ ಕಾರಿ ಸಮಿತಿ ಸದಸ್ಯ ಪ್ರವೀಣ್ ನೆಟ್ಟಾರು ಅವರನ್ನು ಹತ್ಯೆಗೈದ ಕೊಲೆಗಡುಕರೂ ಕೇರಳದಿಂದಲೇ ಬಂದಿದ್ದರು ಎನ್ನಲಾಗಿದೆ.
ದಕ್ಷಿಣ ಕನ್ನಡಕ್ಕೆ ಬಹುಮುಖ್ಯವಾಗಿ ಇರುವ ಕೇರಳದ ಗಡಿಗಳಲ್ಲಿ ಬಂದೋಬಸ್ತ್ ಲೆಕ್ಕಾಚಾರಕ್ಕಷ್ಟೇ. ವಿಟ್ಲದ ಗಡಿ, ಸುಳ್ಯದ ಜಾಲ್ಸೂರು ಗಡಿ, ಉಳ್ಳಾಲದ ತಲಪಾಡಿ ಗಡಿ, ಪುತ್ತೂರಿನ ಈಶ್ವರ ಮಂಗಲದ ಗಡಿಯಲ್ಲಿ ಸಾಕಷ್ಟು ಮುಂಜಾಗ್ರತೆ ವಹಿಸುವಲ್ಲಿ ಎರಡೂ ಸರಕಾರಗಳೂ ಎಡವಿವೆ. ಹಾಗಾಗಿ ಗಡಿಗಳಲ್ಲಿ ಕೊಲೆ, ದರೋಡೆ, ಅಕ್ರಮ ಗೋಸಾಗಾಟ, ಮರಳು, ಮರ ಸಾಗಾಟ ಪ್ರಕರಣಗಳು ನಿರಂತರವಾಗಿ ನಡೆದಿವೆ. ಅದರಲ್ಲೂ ಕೊಲೆಗಡುಕರಿಗಂತೂ ದುಷ್ಕೃತ್ಯಗೈದು ಪರಾರಿಯಾಗಲು ಯಾವುದೇ ಅಡ್ಡಿಯಿಲ್ಲದಂತಾಗಿದೆ.
ವಿಟ್ಲ ಗಡಿ
ವಿಟ್ಲ ಹೋಬಳಿಯಲ್ಲಿ ಕೇರಳ ಮತ್ತು ಕರ್ನಾಟಕವನ್ನು ಸಂಪರ್ಕಿಸಲು ನಾಲ್ಕು ಪ್ರಮುಖ ರಸ್ತೆಗಳಿದ್ದರೆ, ಇನ್ನೂ ಐದಾರು ರಸ್ತೆಗಳು ಅನಧಿಕೃತವಾಗಿವೆ. ಅಡ್ಯನಡ್ಕ ಸಮೀಪದ ಸಾರಡ್ಕದಲ್ಲಿ ಕಡೂರು ಕಾಂಞಂಗಾಡ್ ಅಂತಾರಾಜ್ಯ ಹೆದ್ದಾರಿಯಿದೆ. ಸಾರಡ್ಕ ಚೆಕ್ ಪೋಸ್ಟ್ ನಲ್ಲಿ ಸಿಸಿಟಿವಿ ಅಳವಡಿಸಲಾಗಿದೆ. ಸಾಲೆತ್ತೂರು ಗ್ರಾಮದ ಕಟ್ಟತ್ತಿಲದಿಂದ ಕೇರಳಕ್ಕೆ ಸಾಗಲು ಸಾಧ್ಯವಿದೆ. ಚೆಕ್ ಪೋಸ್ಟ್ ಇದೆ. ಆದರೆ ಸಿಸಿಟಿವಿ ಇಲ್ಲ.