ಕಲಬುರಗಿ: ಮೊಬೈಲ್ ಕಳ್ಳತನ ಮಾಡಿ ಫೋನ್ ಪೇ ಮತ್ತು ಗೂಗಲ್ ಪೇ ಮೂಲಕ ಹಣ ದೋಚುತ್ತಿದ್ದ ಇಬ್ಬರು ಅಂತಾರಾಜ್ಯ ಕಳ್ಳರನ್ನು ಸೆನ್ ಪೊಲೀಸರು ಬಂಧಿಸಿದ್ದಾರೆ.
ಬಂಧಿತರಿಂದ ಒಟ್ಟು 22 ಮೊಬೈಲ್ ಗಳು, 3.50 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತರನ್ನು ತೆಲಂಗಾಣದ ಕಿರಣ್ ರಾಜು ಸಾತಪಾಟಿ ಮತ್ತು ಶಿವಾ ಅಲಿಯಾಸ್ ಶಿವಾಜಿ ವೆಂಕಟೇಶ ಉಪ್ಲಾ ಎಂದು ಗುರುತಿಸಲಾಗಿದೆ.
ಇವರು ಕಲಬುರಗಿ, ವಿಜಯಪುರ, ಬಾಗಲಕೋಟೆ, ಬೆಳಗಾವಿ, ರಾಯಚೂರು ಮತ್ತು ಗದಗ ಜಿಲ್ಲೆಗಳಲ್ಲಿ ಹಲವಾರು ಜನರ ಮೊಬೈಲ್ ಕಳ್ಳತನ ಮಾಡಿದ್ದಾರೆ. ಬಳಿಕ ಆ ಮೊಬೈಲ್‌ನಲ್ಲಿರುವ ಗೂಗಲ್ ಮತ್ತು ಫೋನ್‌ಪೇಗಳಿಂದ ಹಣವನ್ನು ದೋಚುತ್ತಿದ್ದರು. ಅವರು ಪಕ್ಕದ ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲೂ ಕೈ ಚಳಕ ತೋರಿಸಿ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಉಪಟಳ ಉಂಟು ಮಾಡಿದ್ದರು. ಗೂಗಲ್ ಮತ್ತು ಫೋನ್ ಪೇ ಮೂಲಕ ಎಷ್ಟು ಹಣ ಎಗರಿಸಿದ್ದಾರೆ ಎನ್ನುವುದು ತನಿಖೆಯಿಂದ ಗೊತ್ತಾಗಬೇಕಾಗಿದೆ.
ಬಂಧಿತರಿಂದ ಒಂದು ಕಾರು, 22 ಮೊಬೈಲ್ ಜಪ್ತಿ ಮಾಡಿಕೊಳ್ಳಲಾಗಿದೆ. ಮೊಬೈಲ್ ಜತೆ ತಮ್ಮ ಖಾತೆಗಳಿಂದ ಹಣ ಕಳೆದುಕೊಂಡವರು ಆಯಾ ಜಿಲ್ಲೆಗಳಲ್ಲಿ ದೂರು ನೀಡಿದ್ದಾರೆ. ಅದನ್ನು ಆಧರಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.