ತಿರುವನಂತಪುರ: ಶಬರಿಮಲೆಯ ಅಯ್ಯಪ್ಪನ ದೇಗುಲದ ಗರ್ಭಗುಡಿಯ ಚಿನ್ನ ಲೇಪಿತ ಮಾಳಿಗೆಯಲ್ಲಿ ನೀರು ಸೋರಿಕೆಯಾಗುತ್ತಿರುವುದು ದೃಢಪಟ್ಟಿದೆ.
ಜು.16ರಂದು ಮಾಸಿಕ ಪೂಜೆಗೆಂದು ದೇಗುಲದ ಗರ್ಭಗುಡಿ ತೆರೆದಾಗ ಸೋರಿಕೆಯಾಗುತ್ತಿರುವುದು ಗಮನಕ್ಕೆ ಬಂದಿದೆ.
ಗರ್ಭಗುಡಿಯ ಎಡಭಾಗದ ಮಾಳಿಗೆಯಲ್ಲಿ ಸೋರಿಕೆ ಉಂಟಾಗಿದ್ದು, ಶೀಘ್ರವೇ ಅದನ್ನು ದುರಸ್ಥಿಗೊಳಿಸಲಾಗುವುದು.
ಆ.3ರಂದು ದೇಗುಲ ವಾಸ್ತುಶಿಲ್ಪಿಗಳ ತಂಡವು ಪರಿಶೀಲನೆ ನಡೆಸಲಿದೆ. ನಂತರ ದುರಸ್ತಿ ನಡೆಸಲಾಗುವುದು ಎಂದು ತಿರುವಾಂಕೂರು ದೇವಸ್ವಂ ಮಂಡಳಿ ಅಧ್ಯಕ್ಷ ಅಧ್ಯಕ್ಷ ಕೆ.ಅನಂತಗೋಪನ್ ತಿಳಿಸಿದ್ದಾರೆ.
ಅಯ್ಯಪ್ಪ ದೇಗುಲದ ಗರ್ಭಗುಡಿಯ ಮಾಳಿಗೆಗೆ ಚಿನ್ನದ ಹೊದಿಕೆಯನ್ನು ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ 1998ರಲ್ಲಿ ದೇಣಿಗೆಯಾಗಿ ನೀಡಿದ್ದರು.
31ಕೆ.ಜಿ ಚಿನ್ನ ಜತೆ 1900ಕೆ.ಜಿ ತಾಮ್ರವನ್ನು ಕೊಡಲಾಗಿತ್ತು. ಈ ದೇಣಿಗೆಗೆ ಆಗಿನ ಕಾಲದಲ್ಲಿ ಮಲ್ಯ ಅವರಿಗೆ 18 ಕೋಟಿ ರೂ. ವೆಚ್ಚವಾಗಿತ್ತು.