ಬೆಳಗಾವಿ: ಮಳೆಯಿಂದ ಜಿಲ್ಲೆಯಲ್ಲಿ ಉಂಟಾಗಿರುವ ಬೆಳೆ ಹಾಗೂ ಮನೆ ಹಾನಿಯ ಬಗ್ಗೆ ನಿಖರವಾಗಿ ಸಮೀಕ್ಷೆ ನಡೆಸಬೇಕು. ಅಲ್ಲದೇ ತಕ್ಷಣವೇ ಪರಿಹಾರವನ್ನು ನೀಡಲು ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಚಿಕ್ಕೋಡಿ ಪಟ್ಟಣದಲ್ಲಿ ಅತಿವೃಷ್ಟಿ ಹಾಗೂ ಪ್ರವಾಹ ಮುಂಜಾಗ್ರತೆ ಕುರಿತು ಸಭೆ ನಡೆಸಲಾಯಿತು.
ಈ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಳೆಯಿಂದ 877 ಹೆಕ್ಟೇರ್ ಪ್ರದೇಶ ಜಲಾವೃತಗೊಂಡಿದೆ. ನೀರು ಸುರಿದ ಬಳಿಕ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ನೀಡಬೇಕು. ಇದಲ್ಲದೇ ಹಾನಿಗೊಳಗಾಗಿರುವ ಒಟ್ಟಾರೆ 775 ಮನೆಗಳಿಗೂ ಕೂಡ ಮಾರ್ಗಸೂಚಿ ಪ್ರಕಾರ ತಕ್ಷಣವೇ ಪರಿಹಾರವನ್ನು ನೀಡಬೇಕು ಎಂದು ಸೂಚಿಸಿದರು.
ಮಹಾರಾಷ್ಟ್ರದಲ್ಲಿ ಇದುವರೆಗೆ ಎಲ್ಲ ಜಲಾಶಯಗಳು ಸರಾಸರಿ ಶೇ.60ರಷ್ಟು ಮಾತ್ರ ಭರ್ತಿಯಾಗಿರುತ್ತವೆ. ಆಲಮಟ್ಟಿ ಜಲಾಶಯದಿಂದ ಕೂಡ ಪರಿಸ್ಥಿತಿ ಆಧರಿಸಿ 1.25 ಲಕ್ಷ ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ಸಂಭವನೀಯ ಪ್ರವಾಹ ಹಿನ್ನೆಲೆ ರಚಿಸಲಾಗಿರುವ ತಂಡಗಳು ಹಾಗೂ ನೋಡಲ್ ಅಧಿಕಾರಿಗಳು ತಮಗೆ ವಹಿಸಲಾದ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಬೇಕು. ಯಾವುದೇ ಅಧಿಕಾರಿಗಳಿಗೂ ರಜೆ ನೀಡಬಾರದು ಎಂದು ತಿಳಿಸಿದರು.
Laxmi News 24×7