ಬರುವ ಮೂರು ದಿನಗಳಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆ ನಡೆಸಬೇಕು. ಇಲ್ಲದಿದ್ರೆ ಪಾಲಿಕೆ ಕಚೇರಿಗೆ ಬೀಗ ಜಡಿಯಲಾಗುತ್ತದೆ ಎಂದು ಆಮ್ ಆದ್ಮಿ ಪಕ್ಷದ ಮುಖಂಡರು ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಹೌದು ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ನಡೆದು 9 ತಿಂಗಳು ಕಳೆಯುತ್ತಾ ಬಂದರೂ ಇದುವರೆಗೂ ಮೇಯರ್, ಉಪಮೇಯರ್ ಚುನಾವಣೆ ನಡೆದಿಲ್ಲ. ಚುನಾವಣೆಯಲ್ಲಿ ಗೆದ್ದು ಬಂದರೂ ನಗರಸೇವಕರಿಗೆ ಯಾವುದೇ ರೀತಿ ಅಧಿಕಾರ ಕೈಯಲ್ಲಿ ಇಲ್ಲ. ಇದರಿಂದ ಕುಂದಾನಗರದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ಮೇಯರ್, ಉಪಮೇಯರ್ ಚುನಾವಣೆ ನಡೆಸಲು ಸರ್ಕಾರದ ವಿಳಂಬ ಧೋರಣೆ ಖಂಡಿಸಿ ಗುರುವಾರ ಪಾಲಿಕೆ ಮುಂಭಾಗದಲ್ಲಿ ಆಮ್ ಆದ್ಮಿ ಪಕ್ಷದ ಮುಖಂಡರು ಪ್ರತಿಭಟನೆ ನಡೆಸಿದರು.
ಅಲ್ಲದೇ ಕೈಯಲ್ಲಿ ಕೀಲಿ-ಕೈ ಪೋಸ್ಟರ್ ಹಾಗೂ ಬೆಳಗಾವಿಯಲ್ಲಿನ ಸಮಸ್ಯೆಗಳ ಬ್ಯಾನರ್‍ನ್ನು ಹಿಡಿದುಕೊಂಡು ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.ಈ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ವಿಜಯ್ ಪಾಟೀಲ್ ಜನಸಾಮಾನ್ಯರು ತಮ್ಮ ಸಮಸ್ಯೆಗಳನ್ನು ನಗರಸೇವಕರಿಗೆ ಹೇಳಿದ್ರೆ ಅವರು ನಮ್ಮ ಕೈಯಲ್ಲಿ ಯಾವುದೇ ಅಧಿಕಾರ ಇಲ್ಲ ಎಂದು ಕೈ ಎತ್ತುತ್ತಿದ್ದಾರೆ. ಇನ್ನು ನಗರಸೇವಕರು ಇದ್ದರೂ ಕೂಡ ಜಿಲ್ಲಾಧಿಕಾರಿಗಳು ಹಾಗೂ ಪಾಲಿಕೆ ಆಯುಕ್ತರು ಕೂಡಿಕೊಂಡು 470 ಕೋಟಿ ರೂಪಾಯಿ ಬಜೆಟ್ ಮಂಡನೆ ಮಾಡಿದ್ದಾರೆ. ಸರ್ಕಾರಿ ಅಧಿಕಾರಿಗಳೇ ಸರ್ಕಾರ ನಡೆಸೋದಾದ್ರೆ ಮುಖ್ಯಮಂತ್ರಿಗಳು ಯಾಕೆ ಬೇಕು..?