ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಾಕತ್ತು ಇದ್ದರೆ ಈಗಲೇ ಡಿ.ಕೆ.ಶಿವಕುಮಾರ್ ವಿರುದ್ಧ ಸೆಟೆದು ನಿಲ್ಲಲಿ ಎಂದು ಬಿಜೆಪಿ ಸವಾಲು ಹಾಕಿದೆ.
ಕಾಂಗ್ರೆಸ್ ನಾಯಕತ್ವ ಪ್ರಸ್ತಾಪಿಸಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ತಾನೇ ಮುಂದಿನ ಸಿಎಂ ಎಂದು ಬಿಂಬಿಸಿಕೊಳ್ಳಲು ತನ್ನದೇ ಪಟಾಲಂ ಜೊತೆಗೂಡಿ ವ್ಯಕ್ತಿ ಪೂಜೋತ್ಸವ ಮಾಡಿದರೆ ಅದನ್ನು ಶಕ್ತಿ ಪ್ರದರ್ಶನ ಎನ್ನುವುದಿಲ್ಲ.
ಅದು ಉತ್ತರಕುಮಾರನ ಪೌರುಷ ಅಷ್ಟೇ. ತಾಕತ್ತು ಇದ್ದರೆ ಈಗಲೇ ಡಿಕೆಶಿ ವಿರುದ್ಧ ಸೆಟೆದು ನಿಲ್ಲಿ, ರಾಜಕೀಯ ಸಂದಿಗ್ಧತೆ ತಂದಿಡುವುದು ಸಾಮರ್ಥ್ಯವೇ’ ಎಂದು ಪ್ರಶ್ನಿಸಿದೆ.
‘ಸಿದ್ದರಾಮಯ್ಯ ಅವರು ತಳಹದಿಯಿಲ್ಲದೆ ಮಹಡಿ ಮನೆ ಕಟ್ಟಲು ಹೊರಟಿದ್ದಾರೆ. ರಾಜ್ಯದ ಮುಖ್ಯಮಂತ್ರಿಯಾಗಿದ್ದವರಿಗೆ ಮುಂದಿನ ಚುನಾವಣೆಗೆ ಸ್ಪರ್ಧಿಸಲು ಕ್ಷೇತ್ರ ಸಿಗಲಾರದ ಪರಿಸ್ಥಿತಿ ಯಾವ ನಾಯಕರಿಗೂ ಬರಬಾರದು. ಸಿದ್ದರಾಮಯ್ಯನವರೇ, ಇದಕ್ಕಾಗಿ ನಿಮ್ಮ ಬಗ್ಗೆ ನಮಗೆ ಅನುಕಂಪವಿದೆ!’ ಎಂದು ಬಿಜೆಪಿ ವ್ಯಂಗ್ಯವಾಡಿದೆ.
‘ಆ ಭಾಗ್ಯ, ಈ ಭಾಗ್ಯ ಎಂದು ಘೋಷಣೆ ಮಾಡಿದ್ದೇ ಬಂತು, ಜನಪ್ರಿಯತೆ, ಪ್ರಚಾರಕ್ಕಾಗಿ ಮಾಡಿದ ಯಾವ ಕಾರ್ಯವೂ ಈಗ ಸಿದ್ದರಾಮಯ್ಯ ಅವರ ಸಹಾಯಕ್ಕೆ ಬರುತ್ತಿಲ್ಲ. ಹಲವು ಬಿಟ್ಟಿ ಭಾಗ್ಯ ನೀಡಿದ ಅವರಿಗೆ ಈಗ ಕ್ಷೇತ್ರ ಭಾಗ್ಯದ ಫಲಾನುಭವಿಯಾಗಲು ಸಾಧ್ಯವಾಗುತ್ತಿಲ್ಲ. ಇದಕ್ಕಿಂತ ನಾಚಿಗಗೇಡಿನ ಸಂಗತಿ ಮತ್ತೊಂದಿದೆಯೇ’ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.