ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಟ್ವೀಟ್ ಮಾಡಿರುವ ಶಿವಸೇನಾ ಸಂಸದ ಸಂಜಯ್ ರಾವತ್, ಮಹಾರಾಷ್ಟ್ರ ಓರ್ವ ಸಂವೇದನಾಶೀಲ ಹಾಗೂ ಸುಸಂಸ್ಕೃತ ಮುಖ್ಯಮಂತ್ರಿಯನ್ನು ಕಳೆದುಕೊಂಡಿದೆ ಎಂದು ವಿಷಾದಿಸಿದ್ದಾರೆ.
ಶಿವಸೇನೆ ಸಂಸ್ಥಾಪಕ ಬಾಳ್ ಠಾಕ್ರೆ ಅವರ ಪರಂಪರೆಯನ್ನು ಮುಂದೆ ತೆಗೆದುಕೊಂಡು ಹೋಗುತ್ತೇವೆ ಮತ್ತು ಇದಕ್ಕಾಗಿ ಜೈಲಿಗೆ ಹೋಗಲು ಸಿದ್ಧ ಎಂದಿರುವ ರಾವುತ್, ವಿಶ್ವಾಸಘಾತುಕರಿಗೆ ಎಂದಿಗೂ ಒಳ್ಳೆಯದಾಗುವುದಿಲ್ಲ. ಇತಿಹಾಸವನ್ನು ನೋಡಿದಾಗ ಇದು ಸಾಬೀತಾಗಿದೆ ಎಂದು ರೆಬೆಲ್ ಶಾಸಕರ ವಿರುದ್ಧ ಗರಂ ಆಗಿದ್ದಾರೆ. ಅಧಿಕಾರಕ್ಕಾಗಿ ಶಿವಸೇನೆ ಹುಟ್ಟಿಲ್ಲ, ಶಿವಸೇನೆಗಾಗಿ ಅಧಿಕಾರ ಹುಟ್ಟಿದೆ ಎಂಬುವುದು ಬಾಳಾಸಾಹೇಬ್ ಠಾಕ್ರೆಯವರ ಮಂತ್ರವಾಗಿದೆ. ಹಾಗಾಗಿ ನಾವು ಕೆಲಸ ಮಾಡಿ ಮತ್ತೊಮ್ಮೆ ಸ್ವಂತ ಬಲದಿಂದ ಅಧಿಕಾರಕ್ಕೆ ಬರುತ್ತೇವೆ ಎಂದರು.
ಮಹಾರಾಷ್ಟ್ರದಲ್ಲಿ ಅಧಿಕಾರಕ್ಕೆ ಬರಲು ಅಗತ್ಯವಿರುವ ಸಂಖ್ಯಾಬಲವನ್ನು ಹೊಂದಿರುವ ಬಿಜೆಪಿ-ಶಿವಸೇನಾ ಬಂಡಾಯ ಶಾಸಕರ ಒಕ್ಕೂಟವು ಸರ್ಕಾರ ರಚಿಸಲಿದ್ದು, ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಜುಲೈ 1ರಂದು ಶುಕ್ರವಾರ ನೂತನ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಅಲ್ಲದೇ ಏಕನಾಥ್ ಶಿಂಧೆ ಅವರು ಶನಿವಾರದ ಹೊತ್ತಿಗೆ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ.