ನವದೆಹಲಿ, ಜೂ.28- ಶಿವಸೇನೆಯ ಮುಖಂಡರು ಶತಾಯ ಗತಾಯ ಸರ್ಕಾರ ಉಳಿಸಿಕೊಳ್ಳುತ್ತೇವೆ ಎಂದು ಹೇಳುತ್ತಿರುವುದಕ್ಕೆ ವ್ಯತಿರಿಕ್ತವಾಗಿ ರಾಜಕೀಯ ಬೆಳವಣಿಗೆಗಳಾಗುತ್ತಿದ್ದು, ಮಹಾರಾಷ್ಟ್ರದ ಮೂರು ಪಕ್ಷಗಳ ಮೈತ್ರಿಯ ಮಹಾವಿಕಾಸ ಅಘಾಡಿ ಸರ್ಕಾರ ಪತನವಾಗುವುದು ದಿನೇ ದಿನೇ ಖಚಿತವಾಗುತ್ತಿದೆ.
ಅಸ್ಸಾಂನ ಗುವಾಹಟಿಯಲ್ಲಿ ಠಿಕಾಣಿ ಹೂಡಿರುವ ಶಿವಸೇನೆಯ 39 ಶಾಸಕರು, ಪ್ರಹಾರ್ ಜನಶಕ್ತಿ ಪಕ್ಷದ ಇಬ್ಬರು ಹಾಗೂ ಇತರ 11 ಮಂದಿ ಸೇರಿ 50 ಮಂದಿ ಶಾಸಕರು ಉದ್ದವ್ ಠಾಕ್ರೆ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ತಯಾರಿ ನಡೆಸಿದ್ದಾರೆ.
ಬಂಡಾಯ ನಾಯಕ ಏಕನಾಥ್ ಶಿಂಧೆ ಮತ್ತು ಇತರರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನಿನ್ನೆ ನೀಡಿದ ಮಹತ್ವದ ಆದೇಶ ಭಿನ್ನಮತೀಯರಿಗೆ ಅನುಕೂಲವಾಗಿದೆ. ವಿಧಾನಸಭೆಯ ಉಪಾಧ್ಯಕ್ಷ ನರಹರಿ ಜಿರ್ವಾಲ ಅವರು ನೀಡಿದ್ದ ನೋಟಿಸ್‍ಗೆ ಉತ್ತರಿಸಲು ಸುಪ್ರೀಂಕೋರ್ಟ್ ಬಂಡಾಯ ಶಾಸಕರಿಗೆ ಜುಲೈ 11ರವರೆಗೆ ಕಾಲಾವಕಾಶ ನೀಡಿದೆ ಮತ್ತು ಸೂಕ್ತ ರಕ್ಷಣೆ ಒದಗಿಸುವಂತೆ ಸಲಹೆ ನೀಡಿದೆ. ಆದರೆ ಈ ವೇಳೆ ಅವಿಶ್ವಾಸ ನಿರ್ಣಯದ ಬಗ್ಗೆ ನ್ಯಾಯಾಲಯ ಯಾವುದೇ ಸೂಚನೆ ನೀಡಿಲ್ಲ.
ಗುವಾಹಟಿಯಲ್ಲಿರುವ ಶಾಸಕರು ಇಂದು ಮಧ್ಯಾಹ್ನ ಮಹತ್ವದ ಸಭೆ ನಡೆಸಲಿದ್ದು, ಮುಂದಿನ ರಾಜಕೀಯ ನಡೆಯ ಬಗ್ಗೆ ಚರ್ಚೆ ಮಾಡಿ, ಸುಪ್ರೀಂಕೋರ್ಟ್ ತೀರ್ಪಿನಿಂದ ಅವಿಶ್ವಾಸ ನಿರ್ಣಯದ ಪ್ರಕ್ರಿಯೆಗೆ ಎದುರಾಗುವ ಸಾಧಕ-ಭಾದಕಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ಶಿಂಧೆ ಕ್ಯಾಂಪ್‍ನಲ್ಲಿರುವ ಬಂಡಾಯ ಶಾಸಕರೊಬ್ಬರು ಮಾಧ್ಯಮಕ್ಕೆ ಹೇಳಿಕೆ ನೀಡಿದ್ದು, ಸಂಖ್ಯಾಬಲ ಕಳೆದುಕೊಂಡಿರುವ ಮುಖ್ಯಮಂತ್ರಿ ಉದ್ಧವ್‍ಠಾಕ್ರೆ ಅವರು ರಾಜೀನಾಮೆ ನೀಡುವುದನ್ನು ಕಾಯುತ್ತಿದ್ದೇವೆ. ಇನ್ನೆರೆಡು ದಿನಗಳಲ್ಲಿ ರಾಜೀನಾಮೆ ನೀಡದೆ ಇದ್ದರೆ ಮುಂದೆ ನಾವು ಕಾನೂನು ರಿತಿಯಲ್ಲಿ ಮುಂದುವರೆಯುತ್ತೇವೆ ಎಂದಿದ್ದಾರೆ.
ಕೆಲ ಮೂಲಗಳ ಪ್ರಕಾರ ಬಂಡಾಯಗಾರರು ವಿಶೇಷ ವಿಮಾನದಲ್ಲಿ ಗುವಾಹಟಿಯಿಂದ ಮುಂಬೈಗೆ ಆಗಮಿಸಲಿದ್ದಾರೆ. ಸಿಆರ್‍ಪಿಎಫ್‍ನ ವೈ ದರ್ಜೆಯ ಭದ್ರತೆಯಲ್ಲಿ ನೇರವಾಗಿ ರಾಜಭವನಕ್ಕೆ ತೆರಳಿ ರಾಜ್ಯಪಾಲ ಭಗತ್‍ಸಿಂಗ್ ಕೋಶ್ವಾರಿಯವರನ್ನು ಭೇಟಿ ಮಾಡಿ ತಮ್ಮ ಸಂಖ್ಯಾಬಲ ಪ್ರದರ್ಶನ ಮಾಡಲಿದ್ದಾರೆ ಎನ್ನಲಾಗಿದೆ.
ಒಂದು ವೇಳೆ ಆ ಬೆಳವಣಿಗೆ ನಡೆದಿದ್ದೇ ಆದರೆ, ರಾಜ್ಯಪಾಲರು ಮುಖ್ಯಮಂತ್ರಿಯವರಿಗೆ ವಿಶ್ವಾಸಮತ ಸಾಬೀತು ಪಡಿಸುವಂತೆ ಸೂಚಿಸುವ ಸಾಧ್ಯತೆ ಇದೆ. ಆ ವರೆಗೂ ಬಂಡಾಯ ಗುಂಪಿನ ಎಲ್ಲಾ 50 ಶಾಸಕರು ಒಗ್ಗಟ್ಟಾಗಿದ್ದರೆ ಮಹಾ ವಿಕಾಸ ಅಘಾಡಿ ಸರ್ಕಾರ ಪತನ ಖಚಿತವಾಗಲಿದೆ.