ಚಿಕ್ಕೋಡಿ:2024ರ ಬಳಿಕ ಕರ್ನಾಟಕದಲ್ಲಿ ಎರಡು ರಾಜ್ಯ ಹಾಗೂ ದೇಶದಲ್ಲಿ 50 ರಾಜ್ಯಗಳು ನಿರ್ಮಾಣ ಆಗುತ್ತವೆ ಎಂದು ಹೇಳಿಕೆ ನೀಡಿದ್ದ ಸಚಿವ ಸಚಿವ ಉಮೇಶ ಕತ್ತಿ ಮತ್ತೆ ತಮ್ಮ ಹೇಳಿಕೆಯನ್ನು ಪುನರುಚ್ಚರಿಸಿದ್ದಾರೆ.
ಪದೇ ಪದೇ ಉತ್ತರಕರ್ನಾಟಕ ಪ್ರತ್ಯೇಕ ರಾಜ್ಯ ಆಗುತ್ತದೆ ಎಂದು ಹೇಳಿಕೆ ನೀಡುತ್ತಲೇ ಬಂದಿದ್ದ ಉಮೇಶ ಕತ್ತಿ ಇದೀಗ ಇನ್ನು ಒಂದು ಹೆಜ್ಜೆ ಮುಂದೆ ಹೋಗಿದ್ದು, ಭಾನುವಾರ ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ರಾಜ್ಯ ಸೇರಿ ದೇಶದಲ್ಲಿ 50 ರಾಜ್ಯಗಳು ನಿರ್ಮಾಣ ಆಗುತ್ತವೆ.
ಇದನ್ನು ಖುದ್ದು ಪ್ರಧಾನಿ ಮೋದಿಯವರು ಹೇಳಿದ್ದಾರೆ ಎನ್ನುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.
ನನ್ನ ಹೇಳಿಕೆಗೆ ಅವರವರ ಅನಿಸಿಕೆಗಳನ್ನು ಹೇಳಬಹುದು, ಬೇರೆ ಯಾರೂ ಸಹ ನನ್ನ ಹೇಳಿಕೆಗೆ ವಿರೋಧ ಮಾಡುತ್ತಿಲ್ಲ, ಕೆಲಸವಿಲ್ಲದ ಸಿದ್ದರಾಮಯ್ಯ, ಡಿಕೆಶಿ, ಪ್ರಕಾಶ ಹುಕ್ಕೇರಿ, ಗಣೇಶ ಹುಕ್ಕೇರಿ ಇವರೇ ವಿರೋಧ ಮಾಡುತ್ತಿದ್ದಾರೆ. ಈ ದೇಶದಲ್ಲಿ 50 ರಾಜ್ಯಗಳು ನಿರ್ಮಾಣ ಆಗುತ್ತೆ ಆವಾಗ ಕರ್ನಾಟಕ ಎರಡು ರಾಜ್ಯ ಆಗುತ್ತೆ, ಮಹಾರಾಷ್ಟ್ರ ಮೂರು ರಾಜ್ಯವಾಗುತ್ತೆ, ಉತ್ತರ ಪ್ರದೇಶ ನಾಲ್ಕು ರಾಜ್ಯವಾಗಿ ಮಾರ್ಪಡಾಗುತ್ತವೆ. ರಾಜ್ಯಗಳು ವಿಭಜನೆ ಆಗುವುದಿಲ್ಲ, ಜನಸಂಖ್ಯೆಗೆ ಅನುಗುಣವಾಗಿ ರಾಜ್ಯ ನಿರ್ಮಾಣ ಮಾಡಲಾಗುತ್ತದೆ ಎಂದರು.