ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) 2017ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ 106 ಹುದ್ದೆಗಳ ನೇಮಕಾತಿಗೆ ಮುಖ್ಯಪರೀಕ್ಷೆ ನಡೆಸಿ 15 ತಿಂಗಳು ಕಳೆದಿವೆ. 2021ರ ಫೆಬ್ರುವರಿಯಲ್ಲಿ ನಡೆದ ಆ ಪರೀಕ್ಷೆಯ ಫಲಿತಾಂಶ ಇನ್ನೂ ಪ್ರಕಟಿಸಿಲ್ಲ.
ಇನ್ನೊಂದೆಡೆ, ಐದು ವರ್ಷ ಹುದ್ದೆಗಳ ಭರ್ತಿಗೆ ಪರೀಕ್ಷೆ ನಡೆಸದ ರಾಜ್ಯ ಸರ್ಕಾರದ ನಡೆ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳಲ್ಲಿ ಹತಾಶೆ ಮೂಡಿಸಿದೆ.
2018, 2019, 2020, 2021, 2022- ಈ ಐದು ಸಾಲುಗಳಲ್ಲಿ ಕೆಪಿಎಸ್‌ಸಿ ಪರೀಕ್ಷೆಗಳು ನಡೆದಿರಲಿಲ್ಲ.
ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಪ್ರತಿವರ್ಷ ಕೇಂದ್ರ ನಾಗರಿಕ ಸೇವೆಯ (ಐಎಎಸ್, ಐಪಿಎಸ್) ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿ ವರ್ಷದೊಳಗೆ ಕ್ರಮಬದ್ಧವಾಗಿ ಪ್ರಕ್ರಿಯೆ ಪೂರ್ಣಗೊಳಿಸುತ್ತಿದೆ. ಆದರೆ ಇಲ್ಲಿ ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರ ನಿರ್ಲಕ್ಷ್ಯ ತೋರಿಸುತ್ತಿದೆ ಎಂದು ಆಕಾಂಕ್ಷಿಗಳು ಜಾಲತಾಣಗಳಲ್ಲಿ ಅಭಿಯಾನ ಆರಂಭಿಸಿದ್ದಾರೆ.
ಒಂದು ವರ್ಷದ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಅಧಿಸೂಚನೆಯ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲು ಕೆಪಿಎಸ್‌ಸಿ, ಎರಡು ವರ್ಷಕ್ಕೂ ಹೆಚ್ಚು ಅವಧಿ ತೆಗೆದುಕೊಳ್ಳುತ್ತಿದೆ. ಅಷ್ಟೇ ಅಲ್ಲ, ಅಕ್ರಮ, ಭ್ರಷ್ಟಾಚಾರ ಸೇರಿ ವಿವಿಧ ಕಾರಣಗಳಿಗೆ ಬಹುತೇಕ ನೇಮಕಾತಿ ಪ್ರಕ್ರಿಯೆಗಳು ವಿವಿಧ ನ್ಯಾಯಾಲಯಗಳ ಅಂಗಳಗಳಲ್ಲಿವೆ.
ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಭರ್ತಿಗೆ 2011ರಿಂದ ಈವರೆಗೆ 11 ವರ್ಷ ಅವಧಿಯಲ್ಲಿ ಕೆಪಿಎಸ್‌ಸಿ ನಾಲ್ಕು ಬಾರಿ ಅಧಿಸೂಚನೆ ಹೊರಡಿಸಿದೆ. ಮೂರು ಬಾರಿ ಪ್ರಕ್ರಿಯೆ ಪೂರ್ಣಗೊಳಿಸಿದೆ. 2011ನೇ ಸಾಲಿನ 362 ಹುದ್ದೆಗಳ ನೇಮಕಾತಿಯಲ್ಲಿ ವ್ಯಾಪಕ ಅಕ್ರಮ, ಭ್ರಷ್ಟಾಚಾರ, ಸ್ವಜನಪಕ್ಷಪಾತ ನಡೆದಿದೆ ಎಂಬ ಆರೋಪದ ಕಾರಣಕ್ಕೆ ಇಡೀ ಆಯ್ಕೆ ಪಟ್ಟಿಯನ್ನು ಹೈಕೋರ್ಟ್ ರದ್ದುಪಡಿಸಿತ್ತು. ಅದೇ ತೀರ್ಪನ್ನು ಸುಪ್ರೀಂ ಕೋರ್ಟ್ ಸಹ ಎತ್ತಿ ಹಿಡಿದಿತ್ತು.
ಆದರೆ, ಅಕ್ರಮಗಳಿಗೆ ಸಕ್ರಮದ ಮುದ್ರೆಯೊತ್ತಲು ಕಾಯ್ದೆ ರೂಪಿಸಿದ ಸರ್ಕಾರವು ಈಗ ನೇಮಕಾತಿ ಆದೇಶವನ್ನೂ ನೀಡಿದೆ. ಅದನ್ನು ಪ್ರಶ್ನಿಸಿ ಕೆಲವರು ಮತ್ತೆ ಕೋರ್ಟ್ ಮೆಟ್ಟಿಲೇರಿದ್ದಾರೆ. 2015ನೇ ಸಾಲಿನಲ್ಲಿ ಅಂಕಗಳನ್ನು ತಿದ್ದಿದ ಆರೋಪದಲ್ಲಿ 50ಕ್ಕೂ ಹೆಚ್ಚು ಅಭ್ಯರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಎರಡು ವರ್ಷ ಆಯ್ಕೆಯಾದವರಿಗೆ ಕೋರ್ಟ್‌ನ ಅಂತಿಮ ತೀರ್ಪಿಗೆ ಒಳಪಟ್ಟು ನೇಮಕಾತಿ ಆದೇಶ ನೀಡಲಾಗಿದೆ.
‘ಹೋಟಾ ಸಮಿತಿ ಶಿಫಾರಸಿಗೂ ಕಿಮ್ಮತ್ತಿಲ್ಲ’
‘ಕೆಪಿಎಸ್‌ಸಿಯ ಪರೀಕ್ಷಾ ವ್ಯವಸ್ಥೆಯ ಸುಧಾರಣೆಗೆ 2013ರಲ್ಲಿ ರಾಜ್ಯ ಸರ್ಕಾರ ರಚಿಸಿದ್ದ ಪಿ.ಸಿ. ಹೋಟಾ ಸಮಿತಿ, ಪ್ರತಿ ವರ್ಷ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆಸುವಂತೆ ಶಿಫಾರಸು ಮಾಡಿತ್ತು. ಆದರೆ, ಈ ಶಿಫಾರಸಿಗೆ ಸರ್ಕಾರ ಕಿಮ್ಮತ್ತು ನೀಡಿಲ್ಲ. ಅಲ್ಲದೆ, ಒಮ್ಮೆ ಹೊರಡಿಸಿದ ಅಧಿಸೂಚನೆಯ ಪ್ರಕ್ರಿಯೆ ಪೂರ್ಣಗೊಳಿಸದೇ ನಂತರದ ವರ್ಷದ ಅಧಿಸೂಚನೆ ಹೊರಡಿಸದೇ ಇರುವುದರಿಂದ ನೇಮಕಾತಿ ವಿಳಂಬ ಆಗುತ್ತಿದೆ. ಈ ಬಗ್ಗೆ ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿ, ಡಿಪಿಎಆರ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನ ಆಗಿಲ್ಲ’ ಎನ್ನುವುದು ಉದ್ಯೋಗಾಕಾಂಕ್ಷಿಗಳ ಆರೋಪ.
* 106 ಹುದ್ದೆಗಳಿಗೆ ನಡೆದ ಮುಖ್ಯ ಪರೀಕ್ಷೆಯ ಮೌಲ್ಯಮಾಪನ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಅತಿ ಶೀಘ್ರದಲ್ಲಿ ಫಲಿತಾಂಶ ಪ್ರಕಟಿಸುತ್ತೇವೆ.
-ರಿಚರ್ಡ್ ವಿನ್ಸೆಂಟ್ ಡಿಸೋಜಾ, ಕಾರ್ಯದರ್ಶಿ, ಕೆಪಿಎಸ್‌ಸಿ