ಬೆಳಗಾವಿ: ಬೆಳಗಾವಿಯಲ್ಲಿನ ಕನ್ನಡ ಬಾವುಟ, ಫಲಕಗಳನ್ನು ಕಿತ್ತು ಹಾಕುತ್ತೇವೆ ಎಂದು ಪೋಸ್ಟ್ ಹಾಕಿದ, ರಾಯಲ್ ಬೆಳಗಾಂವಕರ್ (royal_belgavkar)_ಎನ್ನುವ ಇನ್ಸ್‌ಟಾಗ್ರಾಮ್ ಖಾತೆ ಹೋಲ್ಡರ್ ವಿರುದ್ಧ ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
‘ಜೂನ್ 27ರೊಳಗೆ ಬೆಳಗಾವಿಯಲ್ಲಿ ಮರಾಠಿ ಬೋರ್ಡ್ ಹಾಕಬೇಕು. ಇಲ್ಲದಿದ್ದರೆ ಬೆಳಗಾವಿಯಲ್ಲಿ ಒಂದೇ ಒಂದು ಕನ್ನಡ ಬಾವುಟ, ಕನ್ನಡ ಫಲಕ ಇರಲು ಬಿಡುವುದಿಲ್ಲ. ತಲ್ವಾರ್ ರೆಡಿ ಮಾಡಿಕೊಳ್ಳಿ. ಇದು ಮನವಿಯಲ್ಲ. ಎಚ್ಚರಿಕೆ’ ಎಂಬ ಪೋಸ್ಟ್ ಮಾಡಿ, ಬೆಳಗಾವಿಯಲ್ಲಿ ಭಾಷಾ ಸಾಮರಸ್ಯ ಕದಡುವ ಯತ್ನಿಸಲಾಗಿದೆ.
ಗಡಿಯಲ್ಲಿ ಸದಾ ನಾಡವಿರೋಧಿ ಚಟುವಟಿಕೆ ಕೈಗೊಳ್ಳುತ್ತಿರುವ ಕಿಡಿಗೇಡಿಗಳು, ಈಗ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ವಿವಾದಾತ್ಮಕ ಸಂದೇಶ ಹರಿಬಿಟ್ಟಿದ್ದಾರೆ.
ಈ ಹಿನ್ನೆಲೆಯಲ್ಲಿ ಹೆಡ್ ಕಾನ್‌ಸ್ಟೆಬಲ್ ಬಿ.ಎನ್.ನಾಕುಡೆ ನೀಡಿದ ದೂರಿನ ಮೇರೆಗೆ, ಖಡೇಬಜಾರ್ ಠಾಣೆಯಲ್ಲಿ ಸ್ವಯಂಪ್ರೇರಿತ ದೂರು ದಾಖಲಿಸಲಾಗಿದೆ. ‘ವಿವಾದಾತ್ಮಕ ಸಂದೇಶದ ಮೂಲಕ ಕೆಲವರು ಸಮಾಜದ ಶಾಂತಿ ಕದಡುವ ಕೆಲಸ ಮಾಡಿದ್ದಾರೆ’ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಬೆಳಗಾವಿಯ ಸರ್ಕಾರಿ ಕಚೇರಿಗಳಲ್ಲಿ ಮರಾಠಿ ಭಾಷೆಯಲ್ಲೇ ನಮಗೆ ದಾಖಲೆ ನೀಡಬೇಕು. ಅಲ್ಲದೆ, ಕಚೇರಿಗಳಲ್ಲಿ ಮರಾಠಿ ನಾಮಫಲಕ ಅಳವಡಿಕೆಗೆ ಕ್ರಮ ಕೈಗೊಳ್ಳಬೇಕು ಎಂದು ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್) ಒತ್ತಾಯಿಸಿದೆ. ಈ ಬೇಡಿಕೆ ಈಡೇರಿಕೆಗಾಗಿ ಮೇ 27ರಂದು ಪ್ರತಿಭಟನೆ ನಡೆಸಲು ಮುಂದಾಗಿದೆ. ಇದಕ್ಕೆ ವಿವಿಧ ಸಂಘಟನೆಗಳ ಬೆಂಬಲ ಪಡೆಯಲು ಬೆಳಗಾವಿ, ಖಾನಾಪುರ ಮತ್ತಿತರ ಕಡೆಗಳಲ್ಲಿ ಸಭೆಗಳನ್ನೂ ನಡೆಸುತ್ತಿದೆ.
ಕನ್ನಡ ಹೋರಾಟಗಾರರ ಆಕ್ರೋಶ:
‘ಮಹಾರಾಷ್ಟ್ರದ ಸೊಲ್ಲಾಪುರ, ಅಕ್ಕಲಕೋಟೆ, ಜತ್ತ್‌ನಲ್ಲಿ ಶೇ.70 ಕನ್ನಡಿಗರೇ ಇದ್ದಾರೆ. ಅಲ್ಲಿನ ಕಚೇರಿಗಳಲ್ಲಿ ಕನ್ನಡ ನಾಮಫಲಕ ಅಳವಡಿಸುವ ಜೊತೆಗೆ ಕನ್ನಡದಲ್ಲೇ ದಾಖಲೆಗಳನ್ನು ನೀಡಬೇಕು. ಆಗ, ಬೆಳಗಾವಿಯಲ್ಲಿ ಮರಾಠಿಗರಿಗೆ ಮರಾಠಿಯಲ್ಲೇ ದಾಖಲೆ ಕೊಟ್ಟರೆ ನಮ್ಮ ಅಭ್ಯಂತರವಿಲ್ಲ. ಒಂದುವೇಳೆ ಜೂನ್ 27ರಂದು ಬೆಳಗಾವಿಯಲ್ಲಿ ಒಂದೇ ಕನ್ನಡ ಫಲಕಕ್ಕೆ ಎಂಇಎಸ್‌ನವರು ಕೈಹಚ್ಚಿದರೂ, ಇಲ್ಲಿ ಮರಾಠಿಯಲ್ಲಿರುವ ಒಂದೇ ನಾಮಫಲಕ ಇರಲು ಬಿಡುವುದಿಲ್ಲ’ ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಎಚ್ಚರಿಕೆ ನೀಡಿದ್ದಾರೆ.
Laxmi News 24×7