ಬೆಂಗಳೂರು: ಆಕ್ಸಿಜನ್ ಕೊಡುವುದಕ್ಕೆ ಆಗದವರು ಇಂದು ಯೋಗ ಮಾಡಲು ಬಂದಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯಕ್ಕೆ ಪ್ರಧಾನಿ ಮೋದಿ ಬಂದಿದ್ದಾರೆ. 19/20 ರಲ್ಲಿ ಬಾರಿ ಪ್ರವಾಹ ಬಂದಿತ್ತು. ಆಗ ಪ್ರಧಾನಿಯವರು ಇಲ್ಲಿಗೆ ಬರಲಿಲ್ಲ. ನೊಂದ ಜನರಿಗೆ ಸಾಂತ್ವನ ಹೇಳಲಿಲ್ಲ. ರಾಜ್ಯಕ್ಕೆ ವಿಶೇಷ ಅನುದಾನ ಕೊಡಲಿಲ್ಲ. ಈಗ ಅವರಿಗೆ ರಾಜ್ಯದ ನೆನಪಾಗಿದೆ. ಆಕ್ಸಿಜನ್ ಕೊಡುವುದಕ್ಕೆ ಆಗದವರು. ಈಗ ಯೋಗ ಮಾಡುವುದಕ್ಕೆ ಬಂದಿದ್ದಾರೆ. ಆಕ್ಸಿಜನ್ ಬಗ್ಗೆ ಪ್ರಧಾನಿಯವರು ಮಾತನಾಡಬೇಕು. 40% ಕಮೀಷನ್ ಬಗ್ಗೆ ದೂರು ಕೊಟ್ಟರು.
ಗುತ್ತಿಗೆದಾರರ ಸಂಘ ಪ್ರಧಾನಿಗೆ ದೂರು ನೀಡಿತ್ತು. ಯಾಕೆ ಚೌಕಿದಾರ್ ಇಲ್ಲಿಯವರೆಗೆ ಉತ್ತರ ಕೊಟ್ಟಿಲ್ಲ. ಸಬ್ ಅರ್ಬನ್ ಯೋಜನೆ ಹೇಳುತ್ತಲೇ ಬರುತ್ತಿದ್ದಾರೆ. ಅನಂತ್ ಕುಮಾರ್ ಕಾಲದಿಂದ ಹೇಳುತ್ತಿದ್ದಾರೆ. ಆದರೆ ಯೋಜನೆ ಮಾತ್ರ ಏನೂ ಆಗಿಲ್ಲ. ಮೋದಿಯವರಿಂದ ರಾಜ್ಯಕ್ಕೆ ದೊಡ್ಡ ಅನ್ಯಾಯವಾಗಿದೆ. ಅವರ ಸರ್ಕಾರ ಕರ್ನಾಟಕದಲ್ಲಿ ಲೂಟಿ ಹೊಡೆಯುತ್ತಿದೆ. ಭ್ರಷ್ಟಾಚಾರ ಹೆಚ್ಚಾಗಿದೆ. ಇದಕ್ಕೆಲ್ಲ ಪ್ರಧಾನಿಯವರು ಅನುಮತಿ ಕೊಟ್ಟಿದ್ದಾರಾ? ಈ ನಮ್ಮ ಪ್ರಶ್ನೆಗೆ ಅವರು ಉತ್ತರ ಕೊಡಲಿ ಎಂದು ಕಿಡಿಕಾರಿದ್ದಾರೆ.