ದೇವಸ್ಥಾನ ಜಾಗ ವಿಚಾರದಲ್ಲಿ ನಡೆದ ಗಲಾಟೆಯಲ್ಲಿ ಹತ್ಯೆಯಾಗಿದ್ದ ಬೆಳಗಾವಿ ತಾಲೂಕಿನ ಗೌಂಡವಾಡ ಗ್ರಾಮದ ಯುವಕನ ಅಂತ್ಯಕ್ರಿಯೆ ಕುಟುಂಬಸ್ಥರ ಆಕ್ರಂದನದ ನಡುವೆ ಸ್ವಗ್ರಾಮದಲ್ಲಿ ನೆರವೇರಿದೆ.
ಹೌದು ಗೌಂಡವಾಡ ಗ್ರಾಮದ ಕಾಲಭೈರವನಾಥ್ ದೇವಸ್ಥಾನದ ಜಾಗದ ವಿಚಾರದಲ್ಲಿ ನಡೆದ ಗಲಾಟೆಯಲ್ಲಿ ಶನಿವಾರ ರಾತ್ರಿ ಸತೀಶ ಪಾಟೀಲ್ ಹತ್ಯೆಯಾಗಿದ್ದರು. ಇದರಿಂದ ಇಡೀ ಗ್ರಾಮದಲ್ಲಿ ರೋಷಾಗ್ನಿ ಜ್ವಾಲೆ ಹೊತ್ತಿಕೊಂಡು ಉದ್ರಿಕ್ತಗೊಂಡ ಗ್ರಾಮಸ್ಥರಿಂದ ಸಾಕಷ್ಟು ವಾಹನಗಳಿಗೆ ಬೆಂಕಿ ಇಡಲಾಗಿತ್ತು. ಘಟನೆಯಿಂದ ಇಡೀ ಗೌಂಡವಾಡ ಗ್ರಾಮದಲ್ಲಿ ಬಿಗುವಿನ ವಾತಾವರಣವೇ ನಿರ್ಮಾಣವಾಗಿತ್ತು. ಕೆಎಲ್‍ಇ ಆಸ್ಪತ್ರೆಯಿಂದ ಸತೀಶ ಪಾಟೀಲ್ ಮೃತದೇಹ ಗೌಂಡವಾಡ ಗ್ರಾಮದ ಅವರ ಮನೆಗೆ ಬರುತ್ತಿದ್ದಂತೆ ಪತ್ನಿ ಸ್ನೇಹಾ ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಸಾವಿರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಜಮಾವಣೆಗೊಂಡಿದ್ದರು. ಈ ವೇಳೆ ಮನೆ ಮುಂದೆ ಧಾರ್ಮಿಕ ವಿಧಿ ವಿಧಾನವನ್ನು ಕಣ್ಣೀರಿನ ಕೋಡಿನಲ್ಲಿಯೇ ಕುಟುಂಬಸ್ಥರು ನೆರವೇರಿಸಿದರು.ನಂತರ ಗ್ರಾಮದಲ್ಲಿ ಸತೀಶ ಪಾಟೀಲ್ ಪಾರ್ಥಿವ ಶರೀರವನ್ನು ಮೆರವಣಿಗೆ ಮೂಲಕ ಸ್ಮಶಾನಕ್ಕೆ ತೆಗೆದುಕೊಂಡು ಬರಲಾಯಿತು. ಮರಾಠ ಸಂಪ್ರದಾಯದಂತೆ ರುದ್ರಭೂಮಿಯಲ್ಲಿ ಸತೀಶ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು. ಮಗನ ಪಾರ್ಥಿವ ಶರೀರಕ್ಕೆ ತಂದೆ ಅಗ್ನಿಸ್ಪರ್ಶ ನೀಡಿದ್ದು. ಅಲ್ಲಿ ನೆರೆದವರ ಕಣ್ಣಲ್ಲಿ ತನ್ನಿಂದ ತಾನೇ ಕಣ್ಣೀರು ಜಿನುಗುವಂತೆ ಮಾಡಿತು. ಇನ್ನು ಗ್ರಾಮದ ಜನರು, ಸಂಬಂಧಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದರು. ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮುಂದುವರಿದಿದೆ.