ಕೊಪ್ಪಳ: ದ್ವಿತೀಯ ಪಿಯುಸಿ ಫಲಿತಾಂಶ ಶನಿವಾರವಷ್ಟೇ ಪ್ರಕಟವಾಗಿದೆ. ಹಲವು ವಿದ್ಯಾರ್ಥಿಗಳು ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವುದು ನೋವಿನ ಸಂಗತಿ. ಆದರೆ, ಇಪ್ಪತ್ತು ವರ್ಷಗಳ ಹಿಂದೆ ಪರೀಕ್ಷೆಯಲ್ಲಿ ಫೇಲಾದ ತಂದೆಯೊಬ್ಬರು ಮಗನೊಂದಿಗೆ ಅಭ್ಯಾಸ ಮಾಡಿ ಪರೀಕ್ಷೆ ಬರೆದಿರುವುದಲ್ಲದೇ ಪುತ್ರನಿಗಿಂತ ಹೆಚ್ಚು ಅಂಕ ಪಡೆದು ಪಾಸಾಗಿದ್ದಾರೆ.
ಕೊಪ್ಪಳ ನಗರಸಭೆ ಮಾಜಿ ಸದಸ್ಯ ಪ್ರಾಣೇಶ ಮಹೇಂದ್ರಕರ್ ಎಂಬುವರು 1999ರಲ್ಲಿ ಗವಿಸಿದ್ದೇಶ್ವರ ಕಾಲೇಜಿನಲ್ಲಿ ಶಿಕ್ಷಣ ವಿಭಾಗದಲ್ಲಿ ದ್ವೀತಿಯ ಪಿಯುಸಿ ಮುಗಿಸಿದ್ದಾರೆ. ಎಲ್ಲ ವಿಷಯಗಳಲ್ಲಿ ಪಾಸ್ ಆದರೂ, ಇಂಗ್ಲಿಷ್ನಲ್ಲಿ ಅನುತ್ತೀರ್ಣಗೊಂಡಿದ್ದರು.
2000ರಲ್ಲಿ ಮರು ಪರೀಕ್ಷೆ ಕಟ್ಟಿದರೂ ತೇರ್ಗಡೆಯಾಗಿರಲಿಲ್ಲ. ಅಲ್ಲಿಗೆ ಪ್ರಯತ್ನ ಕೈ ಬಿಟ್ಟಿದ್ದರು. ಈ ವರ್ಷ ಇವರ ಪುತ್ರ ವಿನಾಯಕ ದ್ವಿತೀಯ ಪಿಯುಸಿ ಪೂರ್ಣಗೊಳಿಸಿದ್ದಾನೆ. ಮಗನೊಂದಿಗೆ ಪರೀಕ್ಷೆ ಕಟ್ಟಿದ ಪ್ರಾಣೇಶ್ ಇಂಗ್ಲಿಷ್ ನಲ್ಲಿ 40 ಅಂಕಗಳಿಸಿ ಪಾಸಾಗಿದ್ದಾರೆ. ಇವರು ಒಟ್ಟಾರೆ 344 ಅಂಕ ಪಡೆದಿದ್ದರೆ, ಇವರ ಮಗ 333 ಅಂಕ ಪಡೆದಿದ್ದಾನೆ. ಮಗನಿಗಿಂತ 10 ಹೆಚ್ಚು ಅಂಕಗಳನ್ನು ಪಡೆದಿದ್ದು, ಓದಿಗೆ ವಯಸ್ಸಿನ ಹಂಗಿಲ್ಲವೆಂದು ಸಾಬೀತು ಮಾಡಿದ್ದಾರೆ.