ಬೆಂಗಳೂರು: ರಾಜ್ಯ ಮತ್ತು ದೇಶ ಸಾಲದ ಸುಳಿಯಲ್ಲಿ ಸಿಲುಕಿವೆ. 2014-15ರಲ್ಲಿ ದೇಶದ ಮೇಲಿನ ಸಾಲ 53 ಲಕ್ಷದ 11 ಸಾವಿರ ಕೋಟಿ ಇತ್ತು, ಈಗ ಮಾರ್ಚ್ ಕೊನೆವರೆಗೆ ಸಾಲ 155 ಲಕ್ಷ ಕೋಟಿಯಾಗಿದೆ. ಮೋದಿ ಅಧಿಕಾರಕ್ಕೆ ( PM Modi ) ಬಂದು 8 ವರ್ಷದಲ್ಲಿ 100 ಲಕ್ಷಕ್ಕೂ ಹೆಚ್ಚು ಕೋಟಿ ಸಾಲ ಮಾಡಿದ್ದಾರೆ.
ಪ್ರತಿಯೋಬ್ಬರ ಮೇಲೆ 1 ಲಕ್ಷದ 70 ಸಾವಿರ ಸಾಲ ಇದೆ ಎಂಬುದಾಗಿ ವಿಪಕ್ಷ ನಾಯಕ ಸಿದ್ಧರಾಮಯ್ಯ ( Siddaramaiah ) ಗುಡುಗಿದ್ದಾರೆ.
ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, 2024ಕ್ಕೆ ಲೋಕಸಭಾ ಚುನಾವಣೆ ಇದೆ, ಕರ್ನಾಟಕದಲ್ಲಿ 2023ರಲ್ಲಿ ರಾಜ್ಯ ವಿಧಾನಸಭೆಗೆ ಚುನಾವಣೆ ನಡಯಲಿದೆ. ಇವುಗಳ ಜೊತೆಗೆ ಜಿಲ್ಲಾ ಮತ್ತು ತಾಲೂಕು ಪಂಚಾಯತಿಗಳಿಗೆ, ಮಹಾನಗರ ಪಾಲಿಕೆ ಚುನಾವಣೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ನವ ಸಂಕಲ್ಪ ಚಿಂತನಾ ಶಿಬಿರ ಆಯೋಜಿಸಲಾಗಿದೆ. ಪಕ್ಷ ಬೂತ್ ಮಟ್ಟದಿಂದ ಕೆಪಿಸಿಸಿ ಮಟ್ಟದ ವರೆಗೆ ಸಂಘಟಿತಗೊಂಡರೆ ಚುನಾವಣೆಗಳ ಗೆಲುವು ಕಷ್ಟದ ಕೆಲಸವಲ್ಲ. ಇಂತಹ ಹಲವು ಚುನಾವಣೆಗಳನ್ನು ಯಶಸ್ವಿಯಾಗಿ ಪಕ್ಷ ಈಗಾಗಲೇ ಎದುರಿಸಿದೆ ಕೂಡ ಎಂದರು.
ಪಕ್ಷವನ್ನು ಬಲಪಡಿಸಲು ಅನೇಕ ಕ್ರಮಗಳನ್ನು ಎಐಸಿಸಿ ಹಾಗೂ ಕೆಪಿಸಿಸಿ ತೆಗೆದುಕೊಳ್ಳಲು ಆರಂಭ ಮಾಡಿದೆ. ಅದರ ಭಾಗವಾಗಿ ಈ ಸಭೆಯೂ ನಡೆಯುತ್ತಿದೆ. ತಾಲೂಕು ಹಾಗೂ ಜಿಲ್ಲಾ ಪಂಚಾಯತಿಗಳಿಗೆ ಚುನಾವಣೆ ನಡೆಸಬೇಕು ಎಂಬ ಆದೇಶವಾಗಿದೆ. ಸುಪ್ರೀಂ ಕೋರ್ಟ್ ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶ ಸರ್ಕಾರದ ಮೀಸಲಾತಿ ಬಗ್ಗೆ ಒಂದು ತೀರ್ಪನ್ನು ನೀಡಿದೆ. ತೀರ್ಪಿನ ಪ್ರಕಾರ ಹಿಂದುಳಿದ ಜಾತಿಗಳಿಗೆ ಮೀಸಲಾತಿ ನೀಡುವಾಗ ಒಂದು ನಂಬಿಕಾರ್ಹ ಮಾಹಿತಿ ಇರಬೇಕು ಮತ್ತು ಮೀಸಲಾತಿ ಪ್ರಮಾಣ 50% ಮೀರಬಾರದು ಎಂದು ಹೇಳಿದೆ. ಇದು 2021 ಏಪ್ರಿಲ್ ನಲ್ಲಿ ನೀಡಿದ ತೀರ್ಪಾಗಿದೆ. ಆದರೆ ರಾಜ್ಯ ಬಿಜೆಪಿ ಸರ್ಕಾರ ಈ ತೀರ್ಪು ಬಂದ ಮೇಲೆ ಯಾವ ಕ್ರಮ ಕೈಗೊಂಡಿಲ್ಲ, ಇತ್ತೀಚೆಗೆ ಭಕ್ತವತ್ಸಲಂ ಅವರ ಸಮಿತಿ ರಚನೆ ಮಾಡಿದೆ, ಆ ಸಮಿತಿ ಇನ್ನು ವರದಿ ನೀಡಿಲ್ಲ. ಹತ್ತು ವಾರದಲ್ಲಿ ಚುನಾವಣೆ ನಡೆಸಬೇಕು ಎಂದು ಕೋರ್ಟ್ ಹೇಳಿದೆ. ನಮ್ಮ ಪಕ್ಷವು ಸರ್ವ ಪಕ್ಷ ಸಭೆಯಲ್ಲಿ ಬಹಳ ಸ್ಪಷ್ಟವಾಗಿ ಹಿಂದುಳಿದ ಜಾತಿಗಳಿಗೆ ಮೀಸಲಾತಿ ಇಲ್ಲದೆ ಚುನಾವಣೆ ನಡೆಸಬಾರದು ಎಂದು ಹೇಳಿದೆ.