ನವದೆಹಲಿ: ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಅರೆಸ್ಟ್ ಆಗಿದ್ದ ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್‌ನನ್ನು ಜಾರಿ ನಿರ್ದೇಶನಾಲಯವು ಜೂನ್ 9ರ ವರೆಗೆ ಕಸ್ಟಡಿಗೆ ಪಡೆದುಕೊಂಡಿದೆ.
ಜೈನ್ ಅವರನ್ನು ರೋಸ್ ರೆವೆನ್ಯೂ ನ್ಯಾಯಾಲಯಕ್ಕೆ ಮಂಗಳವಾರ ಹಾಜರುಪಡಿಸಲಾಗಿತ್ತು. ಜೈನ್ ಪರವಾಗಿ ಹಿರಿಯ ವಕೀಲ ಎನ್.ಹರಿಹರನ್ ಅವರು ವಾದ ಮಂಡಿಸಿದರು. ಕೇಂದ್ರೀಯ ಸಂಸ್ಥೆಯ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದರು.
ಹಿನ್ನೆಲೆ ಏನು?: ಏಪ್ರಿಲ್ ತಿಂಗಳಲ್ಲಿ ಸತ್ಯೇಂದ್ರ ಜೈನ್ ಕುಟುಂಬದ ಒಡೆತನದಲ್ಲಿರುವ 4.81 ಕೋಟಿ ರೂ. ಮೌಲ್ಯದ 5 ಸಂಸ್ಥೆಗಳಿಗೆ ಸೇರಿದ ಸ್ಥಿರಾಸ್ತಿಯನ್ನು ಇಡಿ ಜಪ್ತಿ ಮಾಡಿತ್ತು. 4 ವರ್ಷಗಳ ಹಿಂದೆ 2018ರಲ್ಲಿ ಇಡಿ ಸತ್ಯೇಂದ್ರ ಜೈನ್‌ರನ್ನು ವಿಚಾರಣೆಗೆ ಒಳಪಡಿಸಿತ್ತು. ಆ ಬಳಿಕ ಇದೀಗ ಐಪಿಸಿ ಸೆಕ್ಷನ್ 109 ಮತ್ತು ಸೆಕ್ಷನ್ 13(2)ರ ಅಡಿ ಸತ್ಯೇಂದ್ರ ಜೈನ್ ಮತ್ತು ಇತರರ ವಿರುದ್ಧ ಕೇಂದ್ರೀಯ ತನಿಖಾ ಸಂಸ್ಥೆ (CBI) ದಾಖಲಿಸಿರುವ ಎಫ್‌ಐಆರ್ ಆಧಾರದ ಮೇಲೆ ಇಡಿ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆ ನಡೆಸುತ್ತಿದ್ದು, ಇದೀಗ ಸತ್ಯೇಂದ್ರ ಜೈನ್‌ರನ್ನು ಬಂಧಿಸಿದೆ.