ಬೆಂಗಳೂರು: ಪಿಎಸ್ಐ ನೇಮಕಾತಿಗೆ ಅಂಟಿಕೊಂಡಿರುವುದು ಅಲ್ಲೊಂದು, ಇಲ್ಲೊಂದು ಅಕ್ರಮದ ಕಪುಪಚುಕ್ಕೆಯಲ್ಲ. ಬದಲಿಗೆ ಭ್ರಷ್ಟಾಚಾರದ ಕೂಪದಲ್ಲಿ ಉನ್ನತ ಹಂತದ ಅಧಿಕಾರಿಗಳಿಂದ ಕೆಳಸ್ತರದ ಸಿಬ್ಬಂದಿವರೆಗೆ ಎಲ್ಲರೂ ಮಿಂದೆದ್ದಿದ್ದಾರೆ. ಮೇಲಿದ್ದವರ ಅಣತಿ ಮೇರೆಗೆ ಹುದ್ದೆಗಳ ಮಾರಾಟ ನಡೆದಿದೆ ಎಂಬುದು ಸಿಐಡಿ ತನಿಖೆಯಿಂದ ಬೆಳಕಿಗೆ ಬಂದಿದೆ.
ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿರುವ ಸಬ್ ಇನ್ಸ್ಪೆಕ್ಟರ್ ಅಕ್ರಮ ನೇಮಕಾತಿ ಹಗರಣದಲ್ಲಿ 50 ಕೋಟಿ ರೂ.ಗಳಿಗೂ ಅಧಿಕ ಹಣಕಾಸಿನ ವ್ಯವಹಾರ ನಡೆದಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ವಾಮಮಾರ್ಗದಲ್ಲಿ ಸಬ್ ಇನ್ಸ್ಪೆಕ್ಟರ್ ಆಗಲು ಒಪ್ಪಿಕೊಂಡ ಅಭ್ಯರ್ಥಿಯಿಂದ ತಲಾ 40 ರಿಂದ 80 ಲಕ್ಷ ರೂ.ವರೆಗೆ ವಸೂಲಿ ಮಾಡಿದ್ದು, ಪೊಲೀಸ್ ನೇಮಕಾತಿ ವಿಭಾಗದ ಹಿರಿಯ-ಕಿರಿಯ ಅಧಿಕಾರಿ ಮತ್ತು ಸಿಬ್ಬಂದಿ, ಕೆಲ ರಾಜಕಾರಣಿಗಳು ಹಾಗೂ ಮಧ್ಯವರ್ತಿಗಳಿಗೆ ಪರ್ಸೆಂಟೇಜ್ ನೀಡಲಾಗಿದೆ ಎಂಬ ವಿಚಾರ ಈವರೆಗಿನ ತನಿಖೆಯಲ್ಲಿ ಗೊತ್ತಾಗಿದೆ.
ಈ ಮಧ್ಯೆ ಆಂತರಿಕ ಭದ್ರತಾ ವಿಭಾಗದ ಎಡಿಜಿಪಿ ಅಮೃತ್ ಪೌಲ್ಗೂ ಸಿಐಡಿ ಕಂಟಕ ಎದುರಾಗಿದೆ. ನೇಮಕಾತಿ ವಿಭಾಗದ ಎಡಿಜಿಪಿಯಾಗಿದ್ದ ಸಂದರ್ಭದಲ್ಲೇ ನೇಮಕಾತಿ ಅವ್ಯವಹಾರ ನಡೆದಿದೆ. ಮುಖ್ಯಸ್ಥರಿಗೆ ಗೊತ್ತಿಲ್ಲದೆ ಇಷ್ಟು ದೊಡ್ಡಪ್ರಮಾಣದ ಹಗರಣ ನಡೆಯಲು ಸಾಧ್ಯವೇ ಇಲ್ಲ ಎಂಬ ವಾದದ ಬೆನ್ನಲ್ಲೇ ಅಮೃತ್ ಪೌಲ್ ಅಕ್ರಮ ನೇಮಕಾತಿಗೆ ಪರೋಕ್ಷವಾಗಿ ಕೈಜೋಡಿಸಿದ್ದಾರೆ ಎಂಬುದಕ್ಕೆ ಸಿಐಡಿ ತನಿಖಾಧಿಕಾರಿಗಳಿಗೆ ಸಾಕ್ಷ್ಯ ಸಿಕ್ಕಿದೆ ಎಂದು ಗೊತ್ತಾಗಿದೆ.
ಬಂಧಿತನಾಗಿರುವ ಹೆಡ್ಕಾನ್ಸ್ಟೇಬಲ್ ಶ್ರೀಧರ್ ಮನೆಯಲ್ಲಿ 1.70 ಕೋಟಿ ರೂ., ಮಧ್ಯವರ್ತಿ ಕೇಶವಮೂರ್ತಿ ನಿವಾಸದಲ್ಲಿ 30 ಲಕ್ಷ ರೂ. ಸೇರಿ ಒಟ್ಟು ಬೆಂಗಳೂರಿನಲ್ಲೇ 2.1 ಕೋಟಿ ರೂ.ಗೂ ಅಧಿಕ ಹಣ ಜಪ್ತಿ ಮಾಡಲಾಗಿದೆ. 50 ಕೋಟಿ ರೂ. ಅಧಿಕ ಹಣದ ಹರಿವು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಇನ್ನುಳಿದ ಕೋಟಿ ಕೋಟಿ ಹಣ ಯಾರಿಂದ? ಯಾರ ಖಜಾನೆಗೆ ಸೇರಿದೆ? ಯಾರ್ಯಾರಿಗೆ ಎಷ್ಟು ಪಾಲು ಸಂದಿದೆ? ಎಂಬ ಸತ್ಯ ಹೊರಗೆಳೆಯಲು ತನಿಖೆ ಮುಂದುವರಿದಿದೆ.