ಚಿಕ್ಕೋಡಿ: ಪಟ್ಟಣದ ವಿವಿಧೆಡೆ ಮಕ್ಕಳು ಭಿಕ್ಷಾಟನೆಯಲ್ಲಿ ತೊಡಗುವುದು ಕಂಡುಬರುತ್ತಿದೆ. ಶಾಲೆಗಳು ಪುನರರಾರಂಭವಾಗಿದ್ದರೂ ಅವರು ಕಲಿಕೆಯಿಂದ ದೂರ ಉಳಿದಿದ್ದಾರೆ.
ಸಾರ್ವಜನಿಕರು ಕಿರಿಕಿರಿ ಅನುಭವಿಸುವಂತಾಗಿದೆ. ಈ ಸಾಮಾಜಿಕ ಪಿಡುಗು ರಾಜಾರೋಷವಾಗಿ ನಡೆಯುತ್ತಿದ್ದರೂ ಸಂಬಂಧಿಸಿದ ಅಧಿಕಾರಿಗಳು ಜಾಣ ಕುರುಡುತನ ಪ್ರದರ್ಶಿಸುತ್ತಿರುವುದು ಪ್ರಜ್ಞಾವಂತರ ಅಸಮಾಧಾನಕ್ಕೆ ಕಾರಣವಾಗಿದೆ.
ಪಟ್ಟಣದ ಬಸವ ವೃತ್ತ, ಕೋರ್ಟ್ ಸಂಕೀರ್ಣದ ಎದುರು, ಕೇಂದ್ರ ಬಸ್ ನಿಲ್ದಾಣ, ಸಾರ್ವಜನಿಕ ಆಸ್ಪತ್ರೆ ಮುಂಭಾಗದ ಬಳಿ ಮಕ್ಕಳು ಗುಂಪು ಗುಂಪಾಗಿ ಬೇಡುವುದು ಸಾಮಾನ್ಯವಾಗಿದೆ. ಚಿಕ್ಕ ವಯಸ್ಸಿನವರಿಂದ ಹದಿಹರೆಯದವರೆಗಿನವರು ಭಿಕ್ಷೆ ಬೇಡುತ್ತಿದ್ದಾರೆ. ಓದು-ಬರಹ ಕಲಿಯಬೇಕಾದ ಕೈಗಳಲ್ಲಿ ಪ್ಲೇಟ್ ಹಿಡಿದು, ಅದರಲ್ಲಿ ಯಾವುದಾದರೊಂದು ದೇವರ ಮೂರ್ತಿ ಇಟ್ಟುಕೊಂಡು ಹಣಕ್ಕಾಗಿ ದುಂಬಾಲು ಬೀಳುವುದು ಕಂಡು ಬರುತ್ತಿದೆ.
ಕೆಲವೊಮ್ಮೆ ಸಾರ್ವಜನಿಕರು ಹಣ ನೀಡದಿದ್ದರೆ ಮಕ್ಕಳು ಅವರನ್ನು ಹೀಯಾಳಿಸುವುದೂ ಉಂಟು. ಶಾಲೆ-ಕಾಲೇಜು ವಿದ್ಯಾರ್ಥಿನಿಯರೂ ಅವರಿಂದ ತೊಂದರೆ ಅನುಭವಿಸುತ್ತಿದ್ದಾರೆ. ಕೆಲವು ಮಹಿಳೆಯರು ಕಂಕುಳಲ್ಲಿ ಹಸುಗೂಸುವಿನ ಜೊತೆ ಸಂಚರಿಸಿ ಭಿಕ್ಷೆ ಬೇಡುವುದು ಕಂಡು ಬರುತ್ತಿದೆ. ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.