ಬೆಳಗಾವಿ: ತೋಟಗಾರಿಕೆ ಇಲಾಖೆಯಿಂದ ರೈತರಿಂದ ನೇರವಾಗಿ ಗ್ರಾಹಕರಿಗೆ ಗುಣಮಟ್ಟದ ಮಾವಿನ ಹಣ್ಣುಗಳನ್ನು ಯೋಗ್ಯ ದರದಲ್ಲಿ ತಲುಪಿಸುವ ಉದ್ದೇಶದಿಂದ ನಗರದ ಕ್ಲಬ್ ರಸ್ತೆಯಲ್ಲಿರುವ ಹ್ಯೂಮ್ ಪಾರ್ಕ್‌ನಲ್ಲಿ ಮೇ 26ರಿಂದ ಮೇ 29ರವರೆಗೆ ಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜಿಸಲಾಗಿದೆ.
‘ಜಿಲ್ಲೆಯ ಮಾವು ಬೆಳೆಗಾರರು ಈ ಅವಕಾಶ ಸದ್ಬಳಕೆ ಮಾಡಿಕೊಳ್ಳಬೇಕು. ತಮ್ಮ ಉತ್ಪನ್ನವನ್ನು ಮಧ್ಯವರ್ತಿಗಳ ಹಾವಳಿ ಇಲ್ಲದೆ ಯೋಗ್ಯ ಬೆಲೆಗೆ ಮಾರಬಹುದು. ವಿಷೇಶವಾಗಿ ಈ ಬಾರಿ ಬೆಳಗಾವಿ, ಧಾರವಾಡ ಹಾಗೂ ರತ್ನಗಿರಿ ರೈತರಿಂದ ಹಣ್ಣುಗಳ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಬಾರಿ ಹವಾಮಾನ ವೈಪರೀತ್ಯದಿಂದಾಗಿ ಹಣ್ಣುಗಳು ಒಂದು ತಿಂಗಳು ತಡವಾಗಿ ಬಂದಿವೆ. ರೈತರು ವೈಜ್ಞಾನಿಕ ರೀತಿಯಲ್ಲಿ ಕಾಯಿಗಳನ್ನು ಕಟಾವು ಮಾಡಿ ನೈಸರ್ಗಿಕವಾಗಿ ಮಾಗಿಸಿದ ಹಾಗೂ ಕ್ಯಾಲ್ಸಿಯಂ ಕಾರ್ಬೈಡ್ ಮುಕ್ತ ಹಣ್ಣುಗಳ ಮಾರಾಟದ ವ್ಯವಸ್ಥೆ ನೇರವಾಗಿ ರೈತರಿಂದ ಗ್ರಾಹಕರಿಗೆ ಕಲ್ಪಿಸಲಾಗಿದೆ’ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಮಹಾಂತೇಶ ಮುರಗೋಡ ತಿಳಿಸಿದ್ದಾರೆ.
‘ಮೇಳವನ್ನು 26ರ ಬೆಳಿಗ್ಗೆ 11ಕ್ಕೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಪ್ರದರ್ಶನ ಕೋಣೆಯನ್ನು ಜಿ.ಪಂ. ಸಿಇಒ ಎಚ್.ವಿ. ದರ್ಶನ್ ಉದ್ಘಾಟಿಸಲಿದ್ದಾರೆ. ದ್ರವರೂಪದ ಜೈವಿಕ ಗೊಬ್ಬರ ‘ಅರ್ಕಾ ಮೈಕ್ರೋಬಿಯಲ್ ಕನ್ಸಾರ್ಷಿಯಂ’ ಅನ್ನು ಪ್ರಾದೇಶಿಕ ಆಯುಕ್ತ ಆಮ್ಲಾನ್ ಆದಿತ್ಯ ಬಿಸ್ವಾಸ್ ಬಿಡುಗಡೆ ಮಾಡಲಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.
ಇಲ್ಲಿನ ಜೈವಿಕ ಕೇಂದ್ರದಿಂದ ಅಭಿವೃದ್ಧಿಪಡಿಸಿರುವ ದ್ರವರೂಪದ ಜೈವಿಕ ಗೊಬ್ಬರ ಸಾರಜನಕ ಸ್ಥೀರಿಕರಿಸುವ ರಂಜಕವನ್ನು ಕರಗಿಸುವ ಹಾಗೂ ಸಸ್ಯ ಬೆಳವಣಿಗೆಯನ್ನು ಪ್ರಚೋದಿಸುವ ದಕ್ಷ ಸೂಕ್ಷ್ಮಾಣು ಜೀವಿಗಳಾದ ಮಿಶ್ರಣವಾಗಿದೆ. ಈ ಗೊಬ್ಬರವು ಬೀಜವು ಬೇಗನೆ ಮೊಳೆಯುವಂತೆ ಮಾಡಿ ಸಸ್ಯದ ದೃಢತೆಯನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದ್ದಾರೆ.