ಬೆಂಗಳೂರು: ವಿಧಾನ ಪರಿಷತ್ ಟಿಕೆಟ್ ಆಕಾಂಕ್ಷಿಯಾಗಿದ್ದ ಬಿ.ವೈ. ವಿಜಯೇಂದ್ರ ಅವರ ಆಸೆಗೆ ಬಿಜೆಪಿ ಹೈಕಮಾಂಡ್ ತಣ್ಣಿರೆರಚಿದೆ. ವಿಧಾನ ಪರಿಷತ್ ಚುನಾವಣೆಗೆ ರಾಜ್ಯ ಕೋರ್ ಕಮಿಟಿಯಿಂದ ವಿಜಯೇಂದ್ರ ಹೆಸರು ಶಿಫಾರಸು ಮಾಡಲಾಗಿತ್ತು. ಸಂಸದೀಯ ಮಂಡಳಿಯಲ್ಲಿ ವಿಜಯೇಂದ್ರಗೆ ಟಿಕೆಟ್ ನೀಡುವ ಬಗ್ಗೆ ಸಮಾಲೋಚನೆ ಮಾಡಲಾಗಿತ್ತು.
ಸಾಧಕ ಬಾಧಕಗಳ ಬಗ್ಗೆ ಚರ್ಚೆಯಾಗಿತ್ತು. ಈ ವೇಳೆ ವಿಜಯೇಂದ್ರಗೆ ಟಿಕೆಟ್ ಕೊಡುವುದಕ್ಕೆ ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗಿತ್ತು.
ಮುಂದಿನ ವಿಧಾನಸಭೆ ಚುನಾವಣೆ ಹಾಗೂ ಬಿಎಸ್ವೈ ಪ್ರಚಾರ ಗಮನದಲ್ಲಿ ಇಟ್ಟುಕೊಂಡು ವಿಜಯೇಂದ್ರಗೆ ಟಿಕೆಟ್ ನೀಡಬೇಕು ಎಂದು ಹೈಕಮಾಂಡ್ ಮಟ್ಟದಲ್ಲಿ ವಾದ ಮಾಡಲಾಗಿತ್ತು. ಆದರೆ ವಿಜಯೇಂದ್ರಗೆ ಟಿಕೆಟ್ ನೀಡಿದರೆ ಕುಟುಂಬ ರಾಜಕಾರಣಕ್ಕೆ ಆದ್ಯತೆ ನೀಡಿದಂತಾಗಲಿದೆ. ಇದನ್ನೇ ಕಾಂಗ್ರೆಸ್ ಅಸ್ತ್ರವನ್ನಾಗಿ ಬಳಸಿಕೊಳ್ಳಲಿದೆ ಎಂದು ಕೆಲವರಿಂದ ಅಭಿಪ್ರಾಯ ವ್ಯಕ್ತವಾಗಿದೆ. ಬೇಕಾದರೆ ಮುಂದಿನ ವಿಧಾನಸಭೆಗೆ ಟಿಕೆಟ್ ಕೊಡೋಣ ಪಕ್ಷಕ್ಕೆ ಲಾಭವಾಗಲಿದೆ ಎಂಬ ಮಾತುಗಳು ಕೇಳಿಬಂದ ಹಿನ್ನೆಲೆಯಲ್ಲಿ ವಿಜಯೇಂದ್ರಗೆ ಟಿಕೆಟ್ ಕೈತಪ್ಪಿದೆ ಎನ್ನಲಾಗಿದೆ.
ಇಷ್ಟಾಗುತ್ತಿದ್ದಂತೆಯೇ ಜಾಲತಾಣಗಳಲ್ಲಿ ಇದರ ಬಗ್ಗೆ ಹಲವಾರು ಕಮೆಂಟ್ಗಳು, ತಮ್ಮದೇ ಆದ ವಿಶ್ಲೇಷಣೆಗಳು ಹರಿದಾಡುತ್ತಿವೆ. ವಿಜಯೇಂದ್ರ ಅವರ ಅಭಿಮಾನಿಗಳು ಭಾರಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದರಿಂದ ಬೇಸರಗೊಂಡಿರುವ ವಿಜಯೇಂದ್ರ ಅವರು, ಟ್ವೀಟ್ ಮೂಲಕ ಈ ರೀತಿ ಮನವಿ ಮಾಡಿಕೊಂಡಿದ್ದಾರೆ.
ಟ್ವೀಟ್ನಲ್ಲಿ ಇರುವುದೇನು?
ಸಂಘದ ಶಿಸ್ತು, ಪಕ್ಷದ ಸಂಘಟನೆ, ಜನಪರ ಹೋರಾಟ ಹಾಗೂ ಸೇವೆಯನ್ನು ನಿಜ ಕಾಯಕವೆಂದು ತಿಳಿದು ಬದುಕಿನ ಹೆಜ್ಜೆಯಿಟ್ಟವರು ಪೂಜ್ಯ ತಂದೆ ಯಡಿಯೂರಪ್ಪನವರು ಈ ಕಾರಣಕ್ಕಾಗಿಯೇ ರಾಜ್ಯದ ಮುಖ್ಯಮಂತ್ರಿಯಾಗಿ ನಾಲ್ಕು ಬಾರಿ ಪ್ರಮಾಣವಚನ ಸ್ವೀಕರಿಸುವ ಅವಕಾಶ ಕಲ್ಪಿಸಿದ್ದು ಜನರ ಆಶೀರ್ವಾದ ಹಾಗೂ ಬಿಜೆಪಿ.
ಅಂತೆಯೇ ಅನಿರೀಕ್ಷಿತ ತಿರುವಿನಲ್ಲಿ ರಾಜಕೀಯ ಪ್ರವೇಶಿಸಿದ ನನಗೆ ರಾಜ್ಯ ಬಿಜೆಪಿಯ ಉಪಾಧ್ಯಕ್ಷನಾಗಿ ಮಹತ್ವದ ಜವಾಬ್ದಾರಿ ನೀಡಿ ನನ್ನ ಬೆನ್ನುತಟ್ಟಿ ಬೆಳೆಸುತ್ತಿರುವುದು ಪಕ್ಷ ಮತ್ತು ಪಕ್ಷದ ವರಿಷ್ಠರು. ರಾಜಕೀಯ ಅಧಿಕಾರಗಳು ನಿಂತ ನೀರಲ್ಲ, ಅದು ಹರಿಯುವ ನದಿಯ ಹಾಗೆ. ಇದನ್ನು ಕಾರ್ಯಕರ್ತರು, ಅಭಿಮಾನಿಗಳು ಅರ್ಥಮಾಡಿಕೊಳ್ಳಬೇಕು ಎಂದು ವಿನಂತಿಸಿಕೊಳ್ಳುತ್ತೇನೆ.