ಬೆಂಗಳೂರು ಮೇ 24: “ಪ್ರಧಾನಿ ನರೇಂದ್ರ ಮೋದಿ ಅವರು ಒಬ್ಬ ಡೋಂಗಿ ವ್ಯಕ್ತಿ” ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಟೀಕೆ ಮಾಡಿದರು.
ಜಯನಗರದಲ್ಲಿ ಸೋಮವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, “ಪ್ರಧಾನಿ ಸ್ಥಾನದ ಬಗ್ಗೆ ನನಗೆ ಗೌರವವಿದೆ.
ಆದರೆ ನರೇಂದ್ರ ಮೋದಿ ಅವರು ಒಬ್ಬ ಡೋಂಗಿ ಪ್ರಧಾನಿ. ಅಚ್ಚೇ ದಿನ್ ಬರಲಿದೆ ಎಂದು ದೇಶದ ಜನರಿಗೆ ಅವರು ಹೇಳಿದ್ದರು. ಅಚ್ಚೇ ದಿನ್’ ನಿಜವಾಗಿಯೂ ಬಂತೆ?” ಎಂದು ವ್ಯಂಗ್ಯವಾಡಿದರು.
“ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಡೀಸೆಲ್ ಮೇಲಿನ ಅಬಕಾರಿ ಸುಂಕ 3.46 ರೂ. ಹಾಗೂ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ 9.20 ರೂ. ಇತ್ತು. ನರೇಂದ್ರ ಮೋದಿ ಅವರು ಏಕೆ ಅಬಕಾರಿ ಸುಂಕವನ್ನು ಏರಿಸಿದರು?. ಕೇಂದ್ರ ಸರಕಾರಕ್ಕೆ ಕೇವಲ ಅಬಕಾರಿ ಸುಂಕ ಒಂದರಿಂದಲೇ 26 ಲಕ್ಷ ರೂ. ಆದಾಯ ಬಂದಿದೆ,” ಎಂದು ಸಿದ್ದರಾಮಯ್ಯ ಹೇಳಿದರು.
“ಇದರಿಂದ ತಿಳಿಯುವುದಿಲ್ಲವೇ ಕೇಂದ್ರ ಸರಕಾರ ಒಂದು ಡೋಂಗಿ ಸರಕಾರ ಎಂದು. ಬೆಲೆ ಏರಿಕೆ ನೆಪದಲ್ಲಿ ಅದು ನಾಗರಿಕರ ರಕ್ತ ಹೀರುತ್ತಿದೆ,” ಎಂದು ದೂರಿದರು.
ರಾಜ್ಯ ಸರಕಾರದಿಂದ ಮಲತಾಯಿ ಧೋರಣೆ: “ಬೆಂಗಳೂರಿನ ವಿಧಾನಸಭೆ ಕ್ಷೇತ್ರಗಳಿಗೆ ಅನುದಾನ ಹಂಚಿಕೆ ವಿಷಯದಲ್ಲಿ ರಾಜ್ಯ ಸರಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಕಾಂಗ್ರೆಸ್ ಶಾಸಕರು ಇರುವ ಕ್ಷೇತ್ರಗಳಿಗೆ ಅನುದಾನ ಕಡಿತಗೊಳಿಸಲಾಗುತ್ತಿದೆ” ಎಂದು ಆರೋಪಿಸಿದರು.