ಬೆಂಗಳೂರು: ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪದಡಿ ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿ-ಐಜಿಪಿ) ಕಚೇರಿ ಸೂಪರಿಂಟೆಂಡೆಂಟ್ ಮಂಜುನಾಥ್ ಅವರನ್ನು ಸಿಐಡಿ ಪೊಲೀಸರು ಇತ್ತೀಚೆಗೆ ಬಂಧಿಸಿದ್ದು, ಹೆಚ್ಚಿನ ವಿಚಾರಣೆಗಾಗಿ ಮೇ 23ರವರೆಗೆ ಕಸ್ಟಡಿಗೆ ಪಡೆದುಕೊಂಡಿದ್ದಾರೆ.
‘ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ಪೊಲೀಸ್ ಪ್ರಧಾನ ಕಚೇರಿಯ ವಿಭಾಗವೊಂದರಲ್ಲಿ ಮಂಜುನಾಥ್ ಕೆಲಸ ಮಾಡುತ್ತಿದ್ದ. ಪೊಲೀಸ್ ನೇಮಕಾತಿ ವಿಭಾಗದ ನೌಕರರ ಜೊತೆ ಒಡನಾವಿಟ್ಟುಕೊಂಡು ಅಕ್ರಮದಲ್ಲಿ ಭಾಗಿಯಾಗಿದ್ದ’ ಎಂದು ಸಿಐಡಿ ಮೂಲಗಳು
ಹೇಳಿವೆ.
‘ಪಿಎಸ್‌ಐ ಹುದ್ದೆಗೆ ಅಕ್ರಮವಾಗಿ ಆಯ್ಕೆಯಾಗಿದ್ದ 22 ಅಭ್ಯರ್ಥಿಗಳ ವಿರುದ್ಧ ಹೈಗ್ರೌಂಡ್ಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು. ಕೆಲ ಅಭ್ಯರ್ಥಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಪೊಲೀಸ್ ನೇಮಕಾತಿ ವಿಭಾಗದ ನೌಕರರು ಅಕ್ರಮದಲ್ಲಿ ಶಾಮೀಲಾಗಿರುವ ಮಾಹಿತಿ ಸಿಕ್ಕಿತ್ತು’ ಎಂದೂ ತಿಳಿಸಿವೆ.
‘ನೇಮಕಾತಿ ವಿಭಾಗದಲ್ಲಿ ನಿಯೋಜನೆ ಮೇರೆಗೆ ಕೆಲಸ ಮಾಡುತ್ತಿದ್ದ ಡಿವೈಎಸ್ಪಿ ಶಾಂತಕುಮಾರ್, ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಹರ್ಷ್, ಹೆಡ್ ಕಾನ್‌ಸ್ಟೆಬಲ್‌ಗಳಾದ ಶ್ರೀನಿವಾಸ್, ಶ್ರೀಧರ್ ಹಾಗೂ ಮೀಸಲು ಪೊಲೀಸ್ ಸಬ್ ಇನ್‌ಸ್ಪೆಕ್ಟರ್ (ಆರ್‌ಎಸ್‌ಐ) ಲೋಕೇಶಪ್ಪ ಅವರನ್ನು ಬಂಧಿಸಲಾಗಿತ್ತು.
ಇವರು ನೀಡಿದ್ದ ಮಾಹಿತಿ ಆಧರಿಸಿ, ಡಿಜಿ-ಐಜಿಪಿ ಕಚೇರಿ ನೌಕರ ಮಂಜುನಾಥ್ ಅವರನ್ನೂ ಬಂಧಿಸಲಾಗಿದೆ’ ಎಂದೂ ಸಿಐಡಿ ಮೂಲಗಳು ಹೇಳಿವೆ.
Laxmi News 24×7