ಬೆಂಗಳೂರು, ಮೇ. 13: “ಇದೇ ರೀತಿಯ ಆಡಳಿತ ನೀಡಿದರೆ, ಮಹಾ ನಾಯಕರೇ ಬರೆದಿಟ್ಟುಕೊಳ್ಳಿ, ಮುಂದಿನ ವಿಧಾನಸಭಾ ಚುಣಾವಣೆಯಲ್ಲಿ ಭಾರತೀಯ ಜನತಾ ಪರ್ಟಿ 70 ಸೀಟು ಗೆಲ್ಲೋದು ಕಷ್ಟವಾಗಲಿದೆ. ರಾಜ್ಯದಲ್ಲಿರುವ ಪಕ್ಷದ ಆಡಳಿತ ನೀತಿ ತುರ್ತಾಗಿ ಬದಲಿಸುವುದು ಸೂಕ್ತ”.
ಸರ್ವ ಶಕ್ತಿಯನ್ನು ಮುಡಿಪಾಗಿಟ್ಟು ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ಅಸ್ತಿತ್ವಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕೇಂದ್ರ ನಾಯಕರಿಗೆ ಕಳಿಸಿರುವ ಸಂದೇಶವಿದು.
ಸಂಪುಟ ಪುನಾರಚನೆ ಆಲೋಚನೆಯಲ್ಲಿದ್ದ ಕೇಂದ್ರ ವರಿಷ್ಠ ನಾಯಕರಿಗೆ ಬಿಎಸ್‌ವೈ ನೀಡಿರುವ ಈ ಸಂದೇಶ ಬಿಜೆಪಿ ಕೇಂದ್ರ ನಾಯಕರನ್ನು ಚಿಂತೆಗೀಡು ಮಾಡಿದೆ. ಯಡಿಯೂರಪ್ಪ ಅವರ ಸಂದೇಶದಲ್ಲಿ ವಾಸ್ತವ ಇರುವ ಕಾರಣ ಸಂಪುಟ ಪುನಾರಚನೆ ಮಾಡಬೇಕೋ ? ಬೇಡವೋ ? ಎಂಬ ಗೊಂದಲದಲ್ಲಿ ಸಿಲುಕಿದ್ದಾರೆ.
ಸಂಪುಟ ವಿಸ್ತರಣೆ, ಪುನಾರಚನೆ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದೆಹಲಿಗೆ 9 ಸಲ ಹೋಗಿ ಬಂದ್ರೂ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ. ಯಾಕೆಂದರೆ, ಬಿಜೆಪಿ ಮುಂದಿನ ಚುನಾವಣೆ ಮುಂದಿಟ್ಟುಕೊಂಡು ಹೇಳುವುದಾದರೆ ಯಡಿಯೂರಪ್ಪ ಅವರ ಮಾತುಗಳು ಸತ್ಯಕ್ಕೆ ಹತ್ತಿರವಾಗಿವೆ ಎಂಬ ವಿಚಾರ ಬಿಜೆಪಿ ನಾಯಕರಲ್ಲಿ ತಳಮಳ ಸೃಷ್ಟಿಯಾಗಿದೆ.
ಬೊಮ್ಮಾಯಿ ಸರ್ಕಾರದಲ್ಲಿ 40 ಪರ್ಸೆಂಟ್ ಕಮೀಷನ್ ವಿಚಾರ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಯಿತು. ಈಶ್ವರಪ್ಪ ರಾಜೀನಾಮೆ ನೀಡಿದರು. ಗುತ್ತಿಗೆದಾರರ ಸಂಘವೇ ಸುದ್ದಿಗೋಷ್ಠಿ ನಡೆಸಿ ಬಿಜೆಪಿ ಸರ್ಕಾರದ ಕಮೀಷನ್ ಬಗ್ಗೆ ಆರೋಪಿಸಿತು. ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣದ ಬೆನ್ನಲ್ಲೇ ಇದೀಗ ಪಿಎಸ್‌ಐ ನೇಮಕಾತಿ ಅಕ್ರಮ ಬಿಜೆಪಿ ನಾಯಕರ ಕೊರಳಿಗೆ ಸುತ್ತಿಕೊಂಡಿದೆ. ಹಗರಣಗಳಿಗಿಂತಲೂ ಮಿಗಿಲಾಗಿ ಜನಪರ ತೀರ್ಮಾನ ನೀಡುವಲ್ಲಿ ಬೊಮ್ಮಾಯಿ ಸರ್ಕಾರ ಎಡವುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.