ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಆಯ್ಕೆಯಾಗಿರುವ ಏಳು ಸದಸ್ಯರ ಅವಧಿ ಜೂನ್ 14ಕ್ಕೆ ಮುಕ್ತಾಯವಾಗಲಿದ್ದು, ಈ ಸ್ಥಾನಗಳ ಭರ್ತಿಗೆ ಜೂನ್ 3ರಂದು ಚುನಾವಣೆ ನಡೆಯಲಿದೆ.
ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ನಡೆಯುವ ದ್ವೈವಾರ್ಷಿಕ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ಮಂಗಳವಾರ ವೇಳಾಪಟ್ಟಿ ಪ್ರಕಟಿಸಿದೆ.
ಬಿಜೆಪಿಯ ಲಕ್ಷ್ಮಣ ಸವದಿ, ಲಹರ್ ಸಿಂಗ್ ಸಿರೋಯಾ, ಕಾಂಗ್ರೆಸ್‌ನ ಆರ್.ಬಿ. ತಿಮ್ಮಾಪೂರ, ಅಲ್ಲಂ ವೀರಭದ್ರಪ್ಪ, ವೀಣಾ ಅಚ್ಚಯ್ಯ, ಜೆಡಿಎಸ್‌ನ ಕೆ.ವಿ. ನಾರಾಯಣ ಸ್ವಾಮಿ ಮತ್ತು ಎಚ್.ಎಂ. ರಮೇಶ್ ಗೌಡ ನಿವೃತ್ತಿಯಿಂದ ತೆರವಾಗಲಿರುವ ಸ್ಥಾನಗಳಿಗೆ ಜೂನ್ 3ರಂದು ಚುನಾವಣೆ ನಡೆಯಲಿದೆ ಎಂದು ಆಯೋಗದ ಪ್ರಕಟಣೆ ತಿಳಿಸಿದೆ.
ಮೇ 17ರಂದು ಚುನಾವಣಾ ಅಧಿಸೂಚನೆ ಹೊರಡಿಸಲಾಗುತ್ತದೆ. ಮೇ 24 ನಾಮಪತ್ರ ಸಲ್ಲಿಸಲು ಕೊನೆಯ ದಿನ. ಮೇ 25ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂಪಡೆಯಲು ಮೇ 27 ಕೊನೆಯ ದಿನ.
ಜೂನ್ 3ರಂದು ಬೆಳಿಗ್ಗೆ 9ರಿಂದ ಸಂಜೆ 4ರವರೆಗೂ ಮತದಾನ ನಡೆಯಲಿದೆ. ಅದೇ ದಿನ ಸಂಜೆ 5 ಗಂಟೆಯಿಂದ ಮತ ಎಣಿಕೆ ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ
Laxmi News 24×7