ಬೆಂಗಳೂರು: ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಒಂದು ವರ್ಷ ಬಾಕಿ ಇರುವಾಗಲೇ ಅನ್ಯ ಪಕ್ಷಗಳ ನಾಯಕರನ್ನು ಸೆಳೆಯಲು ಬಿಜೆಪಿ ಕಸರತ್ತು ನಡೆಸುತ್ತಿದೆ. ಆದರೆ “ಆಪರೇಷನ್ ಕಮಲ’ದ ಮೂಲಕ ಬಿಜೆಪಿ ಸೇರಿ ಸರಕಾರ ರಚನೆಗೆ ಕಾರಣವಾಗಿರುವ ವಲಸಿಗರ ಬಗ್ಗೆ ಪಕ್ಷದಲ್ಲಿ ಇನ್ನೂ ವಿಶ್ವಾಸ ಮೂಡಿದಂತಿಲ್ಲ.
ಮೈತ್ರಿ ಸರಕಾರದ ಭಾಗವಾಗಿದ್ದ ಕಾಂಗ್ರೆಸ್ ಹಾಗೂ ಜೆಡಿಎಸ್‌ನಿಂದ ಬಂದಿರುವ 17 ಶಾಸಕರು ಆರಂಭದಲ್ಲಿ ತಮ್ಮದೇ ಆದ ಪ್ರತ್ಯೇಕ ಗುಂಪು ಕಟ್ಟಿ ಒಗ್ಗಟ್ಟು ಪ್ರದರ್ಶಿಸಿದ್ದರು. ಈ ಗುಂಪು ಕ್ರಮೇಣ ನಾಯಕತ್ವ ಪ್ರತಿಷ್ಠೆ ಯಿಂದಾಗಿ ಮೂರು ಹೋಳಾ ಗಿದ್ದು, ಎಲ್ಲರ ನಡೆಯೂ ನಿಗೂಢವಾಗಿದೆ.
ಪಕ್ಷಾಂತರದ ಅನುಮಾನ
ಕಾಂಗ್ರೆಸ್ ಹಾಗೂ ಜೆಡಿಎಸ್‌ನಿಂದ ವಲಸೆ ಬಂದು ಬಿಜೆಪಿಯಲ್ಲಿಯೇ ಮುಂದುವರಿಯುವುದಾಗಿ ಮೇಲಿಂದ ಮೇಲೆ ಹೇಳುತ್ತಿದ್ದರೂ ವಲಸಿಗರ ಬಗ್ಗೆ ಬಿಜೆಪಿಯಲ್ಲಿ ಅನುಮಾನಗಳು ಮುಂದುವರಿದಿವೆ ಎನ್ನಲಾಗುತ್ತಿದೆ.
ಸಚಿವ ಎಂ.ಟಿ.ಬಿ. ನಾಗರಾಜ್ ಕೂಡ ಆಗಾಗ ಬಹಿರಂಗವಾಗಿ ಬೇಸರ ವ್ಯಕ್ತ ಪಡಿಸುತ್ತಿದ್ದು, ಒಂದು ಹಂತದಲ್ಲಿ ಕಾಂಗ್ರೆಸ್‌ಗೆ ಮರಳಲು ಸಿದ್ದರಾಮಯ್ಯ ಅವರನ್ನು ಸಂಪರ್ಕಿಸಿದ್ದಾರೆ ಎನ್ನಲಾಗಿತ್ತು.
ಎಚ್.ವಿಶ್ವನಾಥ್ ತಮ್ಮ ಹೇಳಿಕೆಗಳ ಮೂಲಕ ಬಿಜೆಪಿಯಿಂದ ಅಂತರ ಕಾಯ್ದುಕೊಳ್ಳುತ್ತಿದ್ದು, ಮತ್ತೆ ಜೆಡಿಎಸ್ ಸೇರುವ ಮುನ್ಸೂಚನೆ ನೀಡುತ್ತಿದ್ದಾರೆ. ಬಿಜೆಪಿಗೂ ಅವರ ಬಗ್ಗೆ ಆಸಕ್ತಿ ಇದ್ದಂತಿಲ್ಲ. ವಿಧಾನಪರಿಷತ್ ಸದಸ್ಯ ಆರ್. ಶಂಕರ್, ಎಚ್. ನಾಗೇಶ್, ಶ್ರೀಮಂತ ಪಾಟೀಲ್ ಮತ್ತೆ ಸಚಿವ ರಾಗಲು ಕಸರತ್ತು ನಡೆಸಿದ್ದಾರೆ. ಮಹೇಶ್ ಕುಮಟಳ್ಳಿಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ಸಿಗುವ ಬಗ್ಗೆಯೇ ಸಂಶಯವಿದೆ ಎನ್ನಲಾಗುತ್ತಿದೆ.