ಬೀಳಗಿ(ಬಾಗಲಕೋಟೆ): ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಜನಪ್ರಿಯತೆ ಗಳಿಸಿದ್ದ, ಟಿಕ್ಟಾಕ್, ಹಾಸ್ಯ, ಸಂಗೀತದ ಮೂಲಕ ಅಪಾರ ಅಭಿಮಾನಿಗಳನ್ನ ಹೊಂದಿದ್ದ ಬೀಳಗಿ ಹೆಸ್ಕಾಂ ಲೈನ್ಮನ್ ತಿಮ್ಮಣ್ಣ ಭೀಮಪ್ಪ ಗುರಡ್ಡಿ(27) ದುರಂತ ಅಂತ್ಯ ಕಂಡಿದ್ದಾರೆ.
ನಟ ರಮೇಶ್ ಅರವಿಂದ್ ಅವರು ನಡೆಸಿಕೊಡುತ್ತಿದ್ದ ಕನ್ನಡದ ಕೋಟ್ಯಧಿಪತಿಯಲ್ಲಿ ಭಾಗವಹಿಸಿದ್ದ ತಿಮ್ಮಣ್ಣ 6.40 ಲಕ್ಷ ರೂ. ಗೆದ್ದಿದ್ದರು. ಓದಿದ್ದು ಎಸ್ಸೆಸ್ಸೆಲ್ಸಿ ಆದರೂ ಅಪಾರ ಜ್ಞಾನ ಇತ್ತು. ಟಿಕ್ಟಾಕ್, ಹಾಸ್ಯ, ಸಂಗೀತದಲ್ಲೂ ನಿಪುಣರಾಗಿದ್ದ ತಿಮ್ಮಣ್ಣ, ಖೋ ಖೋ ಕ್ರೀಡಾಪಟು ಕೂಡ ಆಗಿದ್ದರು. ಗ್ರಾಮದ ಮಕ್ಕಳಿಗೆ ಖೋಖೋ ತರಬೇತಿಯನ್ನೂ ಕೊಡುತ್ತಿದ್ದರು. ಊರಲ್ಲಿ ನೂತನವಾಗಿ ಮನೆಯನ್ನು ನಿರ್ಮಿಸಿದ್ದರು. ಇನ್ನೊಂದು ತಿಂಗಳಲ್ಲಿ ಮದುವೆ ನಿಶ್ಚಯ ಆಗುವ ಸಾಧ್ಯತೆಯೂ ಇತ್ತು. ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಅಮಲಝರಿ ಗ್ರಾಮದಲ್ಲಿ ವಾಸವಿದ್ದ ಪಾಲಕರು ಮತ್ತು ತಮ್ಮನ ಜತೆ ತಿಮ್ಮಣ್ಣ ವಾಸವಿದ್ದರು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇಂದು (5) ಅವರ ನೂತನ ಮನೆಯ ಗೃಹಪ್ರವೇಶ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಬೇಕಿತ್ತು. ಇದಕ್ಕೂ 2 ದಿನ ಮೊದಲೇ ತಿಮ್ಮಣ್ಣ ದುರಂತ ಅಂತ್ಯ ಕಂಡಿದ್ದು, ನೇಣುಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.
ಅಮಲಝರಿ ಗ್ರಾಮದ ಹೊರವಲಯದ ಮುಧೋಳ ತಾಲೂಕಿನ ಮಂಟೂರ ವ್ಯಾಪ್ತಿಯ ತೋಟದಲ್ಲಿ ಸೋಮವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ತಂದೆ ಚಿಕಿತ್ಸೆಗೆ ಹಾಗೂ ಮನೆ ನಿರ್ಮಾಣಕ್ಕೆ ಮಾಡಿದ ಸಾಲದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ