ಬೆಂಗಳೂರು: ನವೋದಯ ಆಯಪ್ ಮೂಲಕ ವಿವಿಧ ಪಿಂಚಣಿ ಯೋಜನೆಗಳಡಿ ಫಲಾನುಭವಿಗಳ ದತ್ತಾಂಶ ಸಂಗ್ರಹ, ಆಧಾರ್ ಸಂಖ್ಯೆಗೆ ಜೋಡಿಸಿದ್ದರಿಂದ ರಾಜ್ಯದಲ್ಲಿ ಈವರೆಗೆ 3.58 ಲಕ್ಷ ಬೋಗಸ್ ಫಲಾನುಭವಿಗಳನ್ನು ಪತ್ತೆ ಹಚ್ಚಿ ರದ್ದುಪಡಿಸಿದ್ದರಿಂದ ರಾಜ್ಯದ ಬೊಕ್ಕಸಕ್ಕೆ 430 ಕೋಟಿ ರೂ. ಉಳಿತಾಯವಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ದಲ್ಲಾಳಿಗಳ ಬಳಿ ಮಾಸಾಶನ ಮಂಜೂರು ಆದೇಶಪತ್ರಗಳು, ಒಬ್ಬರಿಗೆ ಎರಡೆರಡು ಪಿಂಚಣಿ, ಸತ್ತವರಿಗೂ ಪಾವತಿಯಾಗಿರುವುದು ಬಯಲಾಗಿದೆ ಎಂದು ತಿಳಿಸಿದರು.
ಅರ್ಹರ ಮನೆ ಬಾಗಿಲಿಗೆ ಸಾಮಾಜಿಕ ಭದ್ರತಾ ಯೋಜನೆಯಡಿ ಒಂಭತ್ತು ಪಿಂಚಣಿ ತಲುಪಿಸುವ ವ್ಯವಸ್ಥೆ ಜಾರಿಗೆ ಬಂದ ನಂತರ 43000 ಜನರಿಗೆ ಮಂಜೂರು ಮಾಡಲಾಗಿದೆ. ಇದೀಗ ಹೊಸ ತಂತ್ರಾಂಶ ಅಭಿವೃದ್ಧಿ ಪಡಿಸಿದ್ದು, ಹಲೋ ಕಂದಾಯ ಸಚಿವರೆ ಎಂದು ಸಹಾಯವಾಣಿಗೆ ಕರೆ ಮಾಡಿದರೆ ಸಾಕು, ಅರ್ಹರಿಗೆ ಮೊಬೈಲ್ ಮುಖೇನ ಮಂಜೂರು ಆದೇಶ ತಲುಪಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಷ್ಟರಲ್ಲೇ ಚಾಲನೆ ನೀಡಲಿದ್ದು, ಇದೇ ಸಂದರ್ಭದಲ್ಲಿ ಸಹಾಯವಾಣಿ ಸಂಖ್ಯೆ ಪ್ರಕಟಿಸಲಾಗುವುದು ಎಂದು ಆರ್.ಅಶೋಕ್ ಹೇಳಿದರು.