ದೇಶದ ಬಹುತೇಕ ಭಾಗಗಳಲ್ಲಿ ತಾಪಮಾನ 45 ಡಿಗ್ರಿಗಳಿಗೆ ತಲುಪಿದೆ. ಬಿಸಿಲಿನ ಬೇಗೆ ಹೆಚ್ಚಾಗಿದ್ದು, ಈಗ ಜನರು ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಇಷ್ಟು ಬಿಸಿಲಿನಲ್ಲಿ ಅಡುಗೆಯೇ ತಯಾರಿಸಬಹುದು ಎಂದು ಕೆಲವರು ಗೇಲಿ ಮಾಡುತ್ತಿದ್ದರೆ, ಇನ್ನೂ ಕೆಲವರು ಈ ಬಿಸಿಲನ್ನೇ ಬಳಸಿಕೊಂಡು ಅಡುಗೆ ಮಾಡಿ ಅಚ್ಚರಿಗೊಳಿಸುತ್ತಿದ್ದಾರೆ.
ಇದನ್ನು ಕೇಳಿ ನಿಮಗೆ ನಗು ಬಂದಿರಬಹುದು ಆದರೆ ಇದು ನಿಜ. ಇತ್ತೀಚೆಗೆ, ಒಡಿಶಾದ ಮಹಿಳೆಯೊಬ್ಬರು ಕಾರಿನ ಬಾನೆಟ್ ಮೇಲೆ ಬ್ರೆಡ್, ರೊಟ್ಟಿ ಬೇಯಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಮಹಿಳೆಯೊಬ್ಬರು ಮೊದಲು ರೊಟ್ಟಿ ಉರಿದು, ನಂತರ ಬಾನೆಟ್ ಮೇಲೆ ಇಟ್ಟು ಅಡುಗೆ ಮಾಡುವುದನ್ನು ವಿಡಿಯೋದಲ್ಲಿ ಕಾಣಬಹುದು.
ಸುಮಾರು ಒಂದು ನಿಮಿಷದ ಈ ವೀಡಿಯೊದಲ್ಲಿ, ಹೆಚ್ಚಿನ ಶಾಖದಿಂದಾಗಿ ಕಾರಿನ ಬಾನೆಟ್ ಗ್ಯಾಸ್ ಮೇಲಿನ ಪ್ಯಾನ್‌ನಷ್ಟೇ ಹೀಟ್ ಆಗುತ್ತಿದ್ದು, ಅದರ ಮೇಲೆ ರೊಟ್ಟಿ ಬೇಯಿಸುತ್ತಿದ್ದಾರೆ. ವಿಡಿಯೋದಲ್ಲಿನ ಮಹಿಳೆ ಥೇಟ್ ಪ್ಯಾನ್ ಮೇಲೆ ಮಾಡಿದಂತೆ ರೊಟ್ಟಿಯನ್ನು ಬಾನೆಟ್ ಮೇಲೆ ತಿರುಗಿಸಿ ಸುಟ್ಟಿದ್ದಾರೆ.
ಒಡಿಶಾದ ಹಲವು ಪ್ರದೇಶಗಳಲ್ಲಿ ತಾಪಮಾನವು 40 ಡಿಗ್ರಿ ತಲುಪಿದೆ. ಅಷ್ಟು ಪ್ರಮಾಣದ ಬಿಸಿಲು ಮತ್ತು ಶಾಖದಲ್ಲಿ ಮನೆಯ ಹೊರಗೆ ನಿಲ್ಲಿಸಿದ ವಾಹನಗಳು ಬೆಂಕಿಯಂತೆ ಬಿಸಿಯಾಗುತ್ತವೆ. ಕಾರುಗಳು ಎಷ್ಟು ಬಿಸಿಯಾಗುತ್ತವೆ ಎಂದರೆ ಅವುಗಳನ್ನು ಮುಟ್ಟಿದರೆ ಕೈ ಸುಟ್ಟು ಹೋಗಬಹುದೆಂಬಂತಾಗುತ್ತದೆ.
ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸದ್ಯ ವೈರಲ್ ಆಗಿದ್ದು, ಜನರು ತಮಾಷೆಯ ಕಾಮೆಂಟ್‌ಗಳನ್ನು ಸಹ ಮಾಡುತ್ತಿದ್ದಾರೆ. ಒಬ್ಬ ಬಳಕೆದಾರ, “ರೋಟಿ ಮಾತ್ರವಲ್ಲ ನಾವು ಕಾರಿನಲ್ಲಿ ದಾಲ್ ಮತ್ತು ಸಬ್ಜಿ ಕೂಡ ಮಾಡಬಹುದು” ಎಂದು ಕಮೆಂಟ್ ಮಾಡಿದ್ದಾನೆ.