ಹುಬ್ಬಳ್ಳಿ: ದೇವರ ಮೂರ್ತಿಗಳ ಆಕರ್ಷಕ ಕೆತ್ತನೆ, ತೇರುಗಳ ಮೇಲೆ ಬದುಕಿನ ಮೌಲ್ಯ ಸಾರುವ ಸಾಲುಗಳು, ಸುಂದರವಾದ ಕಲಾಕೃತಿ ಹಾಗೂ ದಿನಪೂರ್ತಿ ಕೆಲಸ.
ಕುಂದಗೋಳ ತಾಲ್ಲೂಕಿನ ಮಳಲಿ ಗ್ರಾಮದ ಮುರಳೀಧರ ಮಾನಪ್ಪ ಬಡಿಗೇರ ಅವರ ಶೆಡ್‌ನಲ್ಲಿ ನಿತ್ಯ ಕಂಡು ಬರುವ ದೃಶ್ಯಗಳಿವು.
ಮುರಳೀಧರ ಅವರು 1991ರಿಂದ ತೇರುಗಳನ್ನು ಕೆತ್ತನೆ ಮಾಡುವ, ಅವುಗಳಿಗೆ ಚೆಂದದ ರೂಪ ಕೊಟ್ಟು ಆಕರ್ಷಕವಾಗಿ ಕಾಣುವಂತೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಇದುವರೆಗೆ 100ಕ್ಕೂ ಹೆಚ್ಚು ತೇರುಗಳನ್ನು ರಾಜ್ಯದ ವಿವಿಧ ದೇವಸ್ಥಾನಗಳಿಗೆ ಮಾಡಿಕೊಟ್ಟಿದ್ದಾರೆ.
1991ರಲ್ಲಿ ನಿರ್ಮಿಸಿದ ಮೊದಲ ತೇರು ಮಳಲಿ ಗ್ರಾಮದಲ್ಲಿ ಈಗಲೂ ಇದೆ. ಈಗ ಕಾರ್ಮಿಕರ ಕೊರತೆಯಿಂದಾಗಿ ತೇರು ನಿರ್ಮಾಣಕ್ಕೆ ಯಂತ್ರಗಳನ್ನು ಬಳಸುತ್ತಾರೆ. ಆದರೆ, ಮಳಲಿಯಲ್ಲಿ ನಿರ್ಮಿಸಿದ ತೇರು ಸಂಪೂರ್ಣವಾಗಿ ಕೈ ಕೆತ್ತನೆಯಿಂದಲೇ ನಿರ್ಮಾಣವಾಗಿದೆ. ಈಗಲೂ ದೇವರ ಮೂರ್ತಿಗಳನ್ನು ಸಂಪೂರ್ಣವಾಗಿ ಕೈಯಿಂದಲೇ ಕೆತ್ತನೆ ಮಾಡುತ್ತಾರೆ.