ಹಾಸನ: ಸತತ ಮೂರು ಬಾರಿ ಗೆಲ್ಲುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿರುವ ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಜೆಡಿಎಸ್ ಪಕ್ಷ ತೊರೆಯುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಹಲವು ತಿಂಗಳಿಂದ ಗೌಡರು ಕಾಂಗ್ರೆಸ್ ಸೇರುತ್ತಾರೆ ಎಂಬ ಗುಸುಗುಸು ಹರಿದಾಡುತ್ತಿತ್ತು.
ಅನೇಕ ಬಾರಿ ಸಿದ್ದರಾಮಯ್ಯ ಅವರ ಜೊತೆ ಕಾಣಿಸಿಕೊಂಡು, ಕಾರ್ಯಕ್ರಮಕ್ಕೆ ಅವರನ್ನು ಆಹ್ವಾನಿಸಿ ಹೊಗಳುತ್ತಿದ್ದರು.
ಇತ್ತೀಚಿನ ದಿನಗಳಲ್ಲಿ ಜಿಲ್ಲೆಯ ನಾಯಕರೊಂದಿಗೆ ಅಂತರ ಕಾಯ್ದುಕೊಂಡಿದ್ದ ಶಿವಲಿಂಗೇಗೌಡರು, ಜಿಲ್ಲೆಯಲ್ಲಿ ಜಲಧಾರೆಗೆ ಚಾಲನೆ ನೀಡುವ ಕಾರ್ಯಕ್ರಮಕ್ಕೂ ಗೈರಾಗಿದ್ದರು. ಗುರುವಾರ ನಗರದಲ್ಲಿ ನಡೆದ ಜಲಧಾರೆ ಸಮಾವೇಶದಿಂದಲೂ ಹೊರಗುಳಿಯುವ ಮೂಲಕ ಪಕ್ಷ ತೊರೆಯುವ ಸ್ಪಷ್ಟ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ. ಆದರೆ, ಕಳೆದ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾ ಕೇಂದ್ರದಲ್ಲಿ ನಡೆದ ಸಭೆಗೆ ನಾಯಕರು ಸರಿಯಾದ ಮಾಹಿತಿ ನೀಡಿಲ್ಲ ಎಂದು ದೇವೇಗೌಡರ ಎದುರೇ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು.
ತಮ್ಮ ಕ್ಷೇತ್ರದಲ್ಲಿ ಇತ್ತೀಚೆಗೆ ನಡೆದ ದೇವಾಲಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಎಚ್.ಡಿ. ಕುಮಾರಸ್ವಾಮಿ, ಶಾಸಕ ಎಚ್.ಡಿ.ರೇವಣ್ಣ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದರು. ಈ ವೇಳೆ ಮಾತನಾಡಿದ್ದ ಕುಮಾರಸ್ವಾಮಿ, ‘ನಮ್ಮ ಸರ್ಕಾರ ಬಂದರೆ ವಿಶೇಷ ಆಸಕ್ತಿ ವಹಿಸಿ ಮಂತ್ರಿ ಮಾಡುವೆ’ ಎಂದು ಭರವಸೆ ನೀಡಿದ್ದರು.