ಹುಬ್ಬಳ್ಳಿ, ಏಪ್ರಿಲ್ 18; ಶನಿವಾರ ರಾತ್ರಿ ಹಳೇಹುಬ್ಬಳ್ಳಿಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ 89 ಜನರನ್ನು ಬಂಧಿಸಲಾಗಿದೆ.
ಪರಿಸ್ಥಿತಿ ಹತೋಟಿಯಲ್ಲಿದ್ದು ಮುಂಜಾಗ್ರತಾ ಕ್ರಮವಾಗಿ ಏಪ್ರಿಲ್ 20ರ ತನಕ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಜಾರಿಯಲ್ಲಿದೆ.
ಯುವಕ ವಾಟ್ಸಪ್‌ನಲ್ಲಿ ಎಡಿಟ್ ಮಾಡಿದ ಪ್ರಚೋದನಾಕಾರಿ ಪೋಸ್ಟರ್ ಹಾಕಿದ್ದರಿಂದ ಹುಬ್ಬಳ್ಳಿಯಲ್ಲಿ ಶನಿವಾರ ರಾತ್ರಿ ಗಲಭೆ ಉಂಟಾಗಿತ್ತು. ಪೊಲೀಸರು, ಆಸ್ಪತ್ರೆ, ದೇವಾಲಯದ ಮೇಲೆ ಕಲ್ಲು ತೂರಾಟ ನಡೆಸಲಾಗಿತ್ತು. ಘಟನೆಯಲ್ಲಿ ಗಾಯಗೊಂಡ ಪೊಲೀಸರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಧಾರವಾಡ ಸಂಸದ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಗೃಹ ಸಚಿವ ಆರಗ ಜ್ಞಾನೇಂದ್ರ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮುಂತಾದವರು ಭಾನುವಾರ ಗಲಭೆ ನಡೆದ ಪ್ರದೇಶಗಳಿಗೆ ಭೇಟಿ ನೀಡಿದರು. ಗಲಭೆಯಲ್ಲಿ ಗಾಯಗೊಂಡ ಪೊಲೀಸರನ್ನು ಸೆಕ್ಯೂರ್ ಆಸ್ಪತ್ರೆಯಲ್ಲಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಇಂತಹ ಘಟನೆಗಳು ಎಲ್ಲಿಯೂ ನಡೆಯಬಾರದು. ಯಾವುದೇ ಕಾರಣಕ್ಕೂ ಕಾನೂನನ್ನು ಕೈಗೆತ್ತಿಕೊಳ್ಳುವುದು ತಪ್ಪು. ಪೊಲೀಸರ ಮೇಲೆ ಹಲ್ಲೆ ಮಾಡುವ ಹಂತಕ್ಕೆ ತಲುಪಿರುವುದನ್ನು ನೋಡಿ ಕೈಕಟ್ಟಿ ನಿಲ್ಲಲು ಸಾಧ್ಯವಿಲ್ಲ. ಈಗಾಗಲೇ ಗಲಭೆಕೋರರನ್ನು ಬಂಧಿಸಿ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಇಂತಹ ಘಟನೆಗಳಿಗೆ ಪ್ರಚೋದನೆ ಕೊಡುವವರು ಮತ್ತು ಇಂತಹ ಗಲಭೆಯ ಪಿತೂರಿಯ ಹಿಂದಿರುವ ದುಷ್ಟ ಶಕ್ತಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ. ಇಂತಹ ಶಕ್ತಿಗಳನ್ನು ಸಂಪೂರ್ಣವಾಗಿ ಹತ್ತಿಕ್ಕುವ ಕೆಲಸ ಪೊಲೀಸರು ಮಾಡುವಂತೆ ನಿರ್ದೇಶಿಸಲಾಗಿದೆ ಎಂದು ಭರವಸೆ ನೀಡಿದ್ದಾರೆ.