ಹೊಸಪೇಟೆ: ಗೃಹ ಮಂತ್ರಿಗಳು ಆ ಹುದ್ದೆಗೆ ತಕ್ಕಂತೆ ಖಡಕ್ ಇಲ್ಲದಿರುವುದರಿಂದ ಅವರನ್ನು ಶೀಘ್ರ ಬದಲಿಸಬೇಕು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಒತ್ತಾಯಿಸಿದರು. ಹುಬ್ಬಳ್ಳಿ ಘಟನೆಯ ಹಿನ್ನೆಲೆಯಲ್ಲಿ ಅವರು ಈ ಆಗ್ರಹ ಮಾಡಿದರು. ಕಾನೂನು ಸುವ್ಯವಸ್ಥೆಯ ವಿಷಯದಲ್ಲಿ ಸರ್ಕಾರದ ವರ್ತನೆ ಸಾರ್ವಜನಿಕ ನಿರೀಕ್ಷೆಯಂತೆ ಇಲ್ಲ. ಬಿಜೆಪಿ ಇಮೇಜ್‌ಗೆ ಹಾನಿಯಾಗಿದೆ ಎಂಬುದಾಗಿಯೂ ಕಿಡಿಕಾರಿದರು.
ಬಿಜೆಪಿ ಕಾರ್ಯಕಾರಣಿ ಸ್ಥಳದಲ್ಲೇ ಯತ್ನಾಳ ಮಾಧ್ಯಮಗಳ ಮುಂದೆ ವ್ಯಕ್ತಪಡಿಸಿರುವ ಈ ಪ್ರತಿಕ್ರಿಯೆ ಭಾರೀ ಸದ್ದು ಮಾಡಿದೆ. ಹುಬ್ಬಳ್ಳಿಯಂತಹ ಘಟನೆಗಳು ಪದೇ ಪದೆ ಸಂಭವಿಸುವುದರಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತಿದೆ. `ಆರಗ ಜ್ಞಾನೇಂದ್ರ ಅವರಿಗೆ ಕಂದಾಯ, ಲೋಕೋಪಯೋಗಿ. ಗ್ರಾಮೀಣಾಭಿವೃದ್ಧಿಯಂತಹ ಖಾತೆಗಳು ಸೂಕ್ತ’ ಎಂದರು.
`ಬೆಂಗಳೂರಿನ ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಗಲಭೆಕೋರರ ವಿರುದ್ಧ ಸೌಮ್ಯವಾಗಿ ವರ್ತಿಸಿದ್ದೇ, ಶನಿವಾರದ ಹುಬ್ಬಳ್ಳಿ ಘಟನೆಗೆ ಕಾರಣ. ಇಂತಹ ಘಟನೆಗಳು ಮರುಕಳಿಸಿದರೆ ಬಿಜೆಪಿ ಸರ್ಕಾರಕ್ಕೆ ಕಷ್ಟ’ ಎಂದರು.
ಗಲಭೆ ಸೃಷ್ಟಿಸಿ ಬಿಜೆಪಿ ಸರ್ಕಾರಕ್ಕೆ ಕೆಟ್ಟ ಹೆಸರು ತರುತ್ತಿರುವವರನ್ನು ಮನೆ ಮನೆ ಹೊಕ್ಕು ಎಳೆತನ್ನಿ. ಸೂಕ್ತ ಪಾಠ ಕಲಿಸಿ ಎಂದು ಅವರು ಆಗ್ರಹಿಸಿದರು.