ಚುನಾವಣೆ ದ್ವೇಷದ ಹಿನ್ನೆಲೆಯಲ್ಲಿ ಎರಡು ಗುಂಪುಗಳ ನಡುವೆ ಮಾರಕಾಸ್ತ್ರಗಳಿಂದ ಗಲಾಟೆ ನಡೆದಿದ್ದು, ಓರ್ವ ಸಾವನ್ನಪ್ಪಿರುವ ಘಟನೆ ಗದಗದಲ್ಲಿ ನಡೆದಿದೆ.
ಚುನಾವಣೆಯ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದೆ.
ಘಟನೆಯಲ್ಲಿ ಮೂವರಿಗೆ ಚಾಕು ಇರಿಯಲಾಗಿದ್ದು, ಓರ್ವನ ಸ್ಥಿತಿ ಚಿಂತಾಜನಕವಾಗಿತ್ತು. ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಗದಗನ ಬೆಟಗೇರಿಯ ಮಂಜುನಾಥ ನಗರದಲ್ಲಿಯೇ ಈ ಘಟನೆ ನಡೆದಿದೆ. ಗಜೇಂದ್ರ ಸಿಂಗ್ ಸೊಲ್ಲಾಪುರ ಎಂಬುವವರ ಸ್ಥಿತಿ ಚಿಂತಾಜನಕವಾಗಿತ್ತು. ಶಿವರಾಜ್ ಪೂಜಾರ, ಮಲ್ಲೇಶ್ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಗದಗದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ, ತೀವ್ರವಾಗಿ ಗಾಯಗೊಂಡಿದ್ದ ಗಜೇಂದ್ರ ಸಿಂಗ್ ಸಾವನ್ನಪ್ಪಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಬಿಗಿ ಪೋಲಿಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಕುರಿತು ಬೆಟಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹುಡುಗಿಯರನ್ನ ಚುಡಾಯಿಸದಂತೆ ಬುದ್ದಿ ಹೇಳಿದ್ದಕ್ಕೆ ಕೊಲೆ ನಡೆದಿದೆ ಎನ್ನಲಾಗಿದೆ. ಶಿವರಾಜ್ ಪೂಜಾರ್ ಎಂಬಾತನ ಹುಡುಗರಿಗೆ ಗಜೇಂದ್ರಸಿAಗ್ ಬುದ್ಧಿ ಹೇಳಿದ್ದ ಎನ್ನಲಾಗಿದ್ದು, ಇದೇ ನೆಪದಲ್ಲಿ ಗಜೇಂದ್ರ ಹಾಗೂ ಶಿವರಾಜ್ ಮಧ್ಯೆ ಗಲಾಟೆ ನಡೆದಿದೆ.
ಮಧ್ಯಾಹ್ನ ಚಾಕುವಿನಿಂದ ಹಲ್ಲೆ ಮಾಡಿ ಗಜೇಂದ್ರ ಹತ್ಯೆಗೆ ಯತ್ನ ಮಾಡಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಗಜೇಂದ್ರ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.