ಹುಬ್ಬಳ್ಳಿ, ಏಪ್ರಿಲ್ 17; ಸಾಮಾಜಿಕ ಜಾಲತಾಣದಲ್ಲಿ ಯುವಕ ಹಾಕಿದ ಪ್ರಚೋದನಾಕಾರಿ ಪೋಸ್ಟರ್‌ನಿಂದಾಗಿಹುಬ್ಬಳ್ಳಿಯಲ್ಲಿ ವಿವಾದ ಉಂಟಾಗಿದೆ.
ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಲಾಗಿದ್ದು, ಸೆಕ್ಷನ್ 144 ಜಾರಿಗೊಳಿಸಲಾಗಿದೆ.
ಮಸೀದಿ ಮೇಲೆ ಭಗವಾಧ್ವಜ ಹಾರಿಸಿದ ಚಿತ್ರವನ್ನು ಎಡಿಟ್ ಮಾಡಿ ಯುವಕನೊಬ್ಬ ಸ್ಟೇಟಸ್ ಹಾಕಿಕೊಂಡಿದ್ದ. ಇದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಈ ಚಿತ್ರ ವೈರಲ್ ಆಗುತ್ತಿದ್ದಂತೆ ಒಂದು ಕೋಮಿನವರು ಕಲ್ಲು ತೂರಾಟ ನಡೆಸಿದರು.
ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ಸಮೀಪದಲ್ಲೇ ಕಲ್ಲು ತೂರಾಟ ನಡೆದಿದ್ದು, ಇನ್ಸ್‌ಪೆಕ್ಟರ್ ಸೇರಿದಂತೆ ನಾಲ್ವರು ಪೊಲೀಸರು ಗಾಯಗೊಂಡರು. ಸಮೀಪದ ಆಸ್ಪತ್ರೆ ಮೇಲೆಯೂ ಕಲ್ಲು ತೂರಾಟ ನಡೆದಿದ್ದು, ಪೊಲೀಸರು ಅಶ್ರುವಾಯು ಪ್ರಯೋಗ ಮಾಡಿ ಪರಿಸ್ಥಿತಿ ತಿಳಿಗೊಳಿಸಿದರ
ಯುವಕರು ಪೊಲೀಸರ ವಾಹನದ ಮೇಲೆಯೂ ಕಲ್ಲು ತೂರಿದರು. ಅಂತಿಮವಾಗಿ ಪೊಲೀಸರು ಪರಿಸ್ಥಿತಿ ನಿಯಂತ್ರಣ ಮಾಡಲು ಸೆಕ್ಷನ್ 144 ಜಾರಿಗೊಳಿಸಿದ್ದಾರೆ. ಭದ್ರಾವತಿಯಿಂದ ಕ್ಷಿಪ್ರ ಕಾರ್ಯಾಚರಣೆ ಪಡೆ ಕರೆಸಿಕೊಳ್ಳಲಾಗಿದೆ. ರಜೆಯ ಮೇಲೆ ಹೋಗಿದ್ದ ಪೊಲೀಸರಿಗೆ ತಕ್ಷಣ ವಾಪಸ್ ಆಗುವಂತೆ ಸೂಚನೆ ನೀಡಲಾಗಿದೆ.
ಪೊಲೀಸರು ಮತ್ತು ಆಸ್ಪತ್ರೆ ಮೇಲೆ ಕಲ್ಲು ತೂರಾಟ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 30 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ಇನ್ನಷ್ಟು ಜನರ ಬಂಧನವಾಗುವ ನಿರೀಕ್ಷೆ ಇದೆ. ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಪೊಲೀಸ್ ಭದ್ರತೆ ನಿಯೋಜನೆ ಮಾಡಲಾಗಿದೆ.
ಹಳೇ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಮಸೀದಿ ಮೇಲೆ ಭಗವಾಧ್ವಜ ಹಾರಿಸಿದ ಎಡಿಟ್ ಮಾಡಿದ ಪೋಸ್ಟರ್ ಸ್ಟೇಟಸ್ ಹಾಕಿಕೊಂಡಿದ್ದ ಯುವಕ ತಲೆ ಕೆಟ್ಟರೆ ಇಲ್ಲೂ ಭಗವಾಧ್ವಜ ಹಾರಿಸುವೆ. ಜೈ ಶ್ರೀರಾಮ್, ಹಿಂದೂ ಸಾಮ್ರಾಟ್ ಎಂದು ಬರೆದುಕೊಂಡಿದ್ದ. ಈ ಪೋಸ್ಟರ್ ವೈರಲ್ ಆಗುತ್ತಿದ್ದಂತೆ ಒಂದು ಸಮುದಾಯದ ಯುವಕರು ಕಲ್ಲು ತೂರಾಟ ನಡೆಸಿದರು. ಪ್ರಚೋದನಾಕಾರಿ ಪೋಸ್ಟರ್ ಹಾಕಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.